ಚಾಬ್ಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನದಿಂದ ಸರಕು ರವಾನೆ: ಕೇಂದ್ರ
ಹೊಸದಿಲ್ಲಿ, ಜು. 24: ಅಫ್ಘಾನಿಸ್ಥಾನ ಈ ವರ್ಷ ಫೆಬ್ರವರಿಯಿಂದ ಚಾಬ್ಹಾರ್ ಬಂದರಿನ ಮೂಲಕ ಭಾರತಕ್ಕೆ ನಾಲ್ಕು ಹೊರೆ ಸರಕುಗಳನ್ನು ರವಾನಿಸಿದೆ ಎಂದು ಲೋಕಸಭೆಗೆ ಬುಧವಾರ ಮಾಹಿತಿ ನೀಡಲಾಯಿತು.
ಅಮೆರಿಕ ಹಾಗೂ ಇರಾನ್ನ ಉದ್ವಿಗ್ನತೆಯ ಪರಿಣಾಮ ಚಾಬ್ಹಾರ್ ಬಂದರಿನಲ್ಲಿ ಅಭಿವೃದ್ಧಿ ಹಾಗೂ ಭಾರತದ ಕಾರ್ಯಾಚರಣೆ ಬಗೆಗಿನ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಲಿಖಿತ ಪ್ರತಿಕ್ರಿಯೆ ನೀಡಿದರು. ಅಫ್ಘಾನಿಸ್ತಾನಕ್ಕೆ ಮಾನವೀಯ ನೆಲೆಯ ಸರಕುಗಳ ಪೂರೈಕೆ ಹಾಗೂ ಯುದ್ಧ ಜರ್ಝರಿತ ದೇಶಕ್ಕೆ ಆರ್ಥಿಕ ಪರ್ಯಾಯ ಒದಗಿಸಲು ಚಾಬ್ಹಾರ್ ಬಂದರಿನ ಕಾರ್ಯಾಚರಣೆ ಮುಂದುವರಿಯುವ ಪ್ರಾಮಖ್ಯತೆಯನ್ನು ಅಮೆರಿಕ ಮನಗಂಡಿದೆ ಎಂದು ಅವರು ತಿಳಿಸಿದ್ದಾರೆ.
ಅಫ್ಘಾನಿಸ್ತಾನ ಕೂಡ ಈ ಬಂದರು ಸೌಲಭ್ಯ ಬಳಸಲು ಆರಂಭಿಸಿದೆ ಎಂದು ಉಲ್ಲೇಖಿಸಿದ ಅವರು, ಅಫ್ಘಾನಿಸ್ತಾನ ತನ್ನ ಮೊದಲ ಹೊರೆ ಸರಕನ್ನು ಫೆಬ್ರವರಿ 2019ರಲ್ಲಿ ಚಾಬ್ಹಾರ್ ಬಂದರಿನ ಮೂಲಕ ರವಾನಿಸಿತ್ತು ಎಂದು ಹೇಳಿದ್ದಾರೆ. ಅನಂತರ ಜೂನ್ 2019ರಲ್ಲಿ ಅಪ್ಘಾನಿಸ್ತಾನ ಮತ್ತೆ ಮೂರು ಹೊರೆ ಸರಕನ್ನು ಭಾರತಕ್ಕೆ ಇದೇ ಬಂದರಿನ ಮೂಲಕ ಕಳುಹಿಸಿಕೊಟ್ಟಿತು ಎಂದು ಅವರು ತಿಳಿಸಿದರು.