ದ.ಕ.ಜಿಲ್ಲೆಯಲ್ಲಿ ಡೆಂಗ್: ಮತ್ತೆ 32 ಪ್ರಕರಣಗಳು ದಾಖಲು

ಮಂಗಳೂರು : ದ.ಕ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ ಹಾವಳಿ ಹೆಚ್ಚುತ್ತಿದ್ದು, ಕರಾವಳಿ ಅಕ್ಷರಶಃ ನಲುಗಿ ಹೋಗಿದೆ. ಜಿಲ್ಲೆಯಲ್ಲಿ ಬುಧವಾರ ಮತ್ತೆ 32 ಡೆಂಗ್ ಪ್ರಕರಣಗಳು ದಾಖಲಾಗಿವೆ.
ಈ ಪೈಕಿ ಮಂಗಳೂರು ತಾಲೂಕಿನಲ್ಲಿ 31 ಡೆಂಗ್ ಪ್ರಕರಣಗಳು ದಾಖಲಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಓರ್ವ ವ್ಯಕ್ತಿಗೆ ಡೆಂಗ್ ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಡಳಿತದ ಅಂಕಿ-ಅಂಶ ಪ್ರಕಟನೆಯಲ್ಲಿ ತಿಳಿಸಿದೆ.
ಡೆಂಗ್ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮನಪಾ ಸರ್ವಸನ್ನದ್ಧವಾಗಿವೆ. ಈಗಾಗಲೇ ಡೆಂಗ್ ಆಕ್ರಮಿತ ಪ್ರದೇಶಕ್ಕೆ ಆರೋಗ್ಯ ಇಲಾಖೆಗಳ ತಂಡ ಭೇಟಿ ನೀಡಿ, ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡಿದೆ.
ಮಂಗಳೂರು ನಗರದ ವಿವಿಧೆಡೆ ಡೆಂಗ್ ಶಂಕಿತ ಪ್ರದೇಶವೆಂದು ಗುರುತಿಸಲಾದ ಸ್ಥಳಗಳಲ್ಲಿ ಫಾಗಿಂಗ್ ನಡೆಸಲಾಗುತ್ತಿದೆ. ಮನೆ ಸುತ್ತಮುತ್ತ, ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿರುವ ಲಕ್ಷಣಗಳು ಕಂಡು ಬಂದ ಪಕ್ಷದಲ್ಲಿ ಸಂಬಂಧಪಟ್ಟವರಿಗೆ ಸ್ಥಳದಲ್ಲೇ ಐದರಿಂದ 20 ಸಾವಿರ ರೂ. ವರೆಗೆ ದಂಡವನ್ನೂ ವಿಧಿಸಲಾಗುತ್ತಿದೆ.





