ವಿಶ್ವದ ಅದ್ಭುತ ಸ್ಮಾರಕಕ್ಕೆ ಈಗ ಕೀಟಬಾಧೆ

ಆಗ್ರಾ, ಜು.25: ವಿಶ್ವದ ಏಳು ಅದ್ಭುತಗಳಲ್ಲೊಂದಾದ ತಾಜ್‌ಮಹಲ್‌ನ ಅಮೃತಶಿಲೆ ಗೋಡೆಗಳಲ್ಲಿ, ಕೀಟಬಾಧೆಯಿಂದಾಗಿ ಕಪ್ಪು ಹಾಗೂ ಹಸಿರು ಚುಕ್ಕೆಗಳು ಕಾಣಿಸಿಕೊಂಡಿವೆ.
ಇದು ನಿರಂತರ ಸಮಸ್ಯೆಯಾಗಿ ಕಾಡುತ್ತಿದ್ದು, ಯಮುನಾನದಿಯಲ್ಲಿ ಹೊಲಸು ತುಂಬಿರುವ ಪರಿಣಾಮವಾಗಿ ಕೀಟಗಳ ಸಂತಾನೋತ್ಪತ್ತಿಗೆ ಅದು ಪ್ರಶಸ್ತ ತಾಣವಾಗಿ ಮಾರ್ಪಟ್ಟಿದೆ ಎಂದು ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಆಗ್ರಾ ವೃತ್ತದ ಅಧೀಕ್ಷಕ ಪ್ರಾಚ್ಯತಜ್ಞ ವಸಂತ್ ಸ್ವರ್ಣಕರ್ ಹೇಳಿದ್ದಾರೆ.
"ಗೋಲ್ಡಿಚಿರೋಮಿನಸ್ ಎಂಬ ನಿರ್ದಿಷ್ಟ ಕೀಟವೊಂದರ ಹಿಕ್ಕೆಯು ಅಮೃತಶಿಲೆಯ ಗೋಡೆಗಳಲ್ಲಿ ಸಂಗ್ರಹವಾಗಿ ಕಪ್ಪು ಮತ್ತು ಹಸಿರು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ನೆಲಹಾಸಿನ ಮೊಸಾಯಿಕ್ ಮತ್ತು ಅಮೃತಶಿಲೆಯಲ್ಲಿ ಕೆತ್ತಲಾದ ಅಪೂರ್ವ ವಿನ್ಯಾಸಕ್ಕೆ ಹಾನಿ ಮಾಡುತ್ತಿದೆ. ಹಿಂದೆ ಈ ಐತಿಹಾಸಿಕ ಸ್ಮಾರಕಕ್ಕೆ ಎಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಿಗಣೆ ಕಾಟ ಎದುರಾಗುತ್ತಿತ್ತು" ಎಂದು ವಿವರಿಸಿದ್ದಾರೆ.
ಹದಿನೇಳನೇ ಶತಮಾನದ ಈ ಸ್ಮಾರಕವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಎಎಸ್‌ಐ ಆರಂಭಿಸಿದ್ದು, ಪ್ರತಿ ಶುಕ್ರವಾರ ಪ್ರವಾಸಿಗರಿಗೆ ನಿಷೇಧ ಇರುವ ಅವಧಿಯಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ಗೋಡೆ ಸ್ವಚ್ಛಗೊಳಿಸಲು ಭಟ್ಟಿ ಇಳಿಸಿದ ನೀರು ಬಳಸಲಾಗುತ್ತದೆ. ಆದರೆ ಪದೇಪದೇ ಹೀಗೆ ಉಜ್ಜುವುದರಿಂದ ಅಮೃತಶಿಲೆಯ ಹೊಳಪು ಮಬ್ಬಾಗುವ ಸಾಧ್ಯತೆ ಇದೆ ಎನ್ನುವುದು ಅವರ ಅಭಿಮತ. ಈ ಸಮಸ್ಯೆಗೆ ಇರುವ ದೀರ್ಘಾವಧಿ ಪರಿಹಾರವೆಂದರೆ ನದಿಯನ್ನು ಸ್ವಚ್ಛಗೊಳಿಸುವುದು ಎಂದು ಅವರು ಸ್ಪಷ್ಟಪಡಿಸುತ್ತಾರೆ.








