ಟೀಂ ಇಂಡಿಯಾ ಜೆರ್ಸಿ ಅಲಂಕರಿಸಲಿದೆ ಈ ಬ್ರಾಂಡ್

ಮುಂಬೈ, ಜು.25: ಮುಂದಿನ ಸೆಪ್ಟೆಂಬರ್‌ನಿಂದ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಜೆರ್ಸಿಯಲ್ಲಿ ಚೀನಾದ ಜನಪ್ರಿಯ ಮೊಬೈಲ್ ಉತ್ಪಾದಕ ಕಂಪೆನಿಯಾದ ಒಪ್ಪೋ ಲಾಂಛನ ಮರೆಯಾಗಲಿದೆ. 2017ರ ಮಾರ್ಚ್‌ನಲ್ಲಿ ಐದು ವರ್ಷಗಳ ಅವಧಿಗೆ ಜೆರ್ಸಿ ಹಕ್ಕನ್ನು 1,079 ಕೋಟಿ ರೂಪಾಯಿಗಳಿಗೆ ಒಪ್ಪೋ ಖರೀದಿಸಿತ್ತು. ಈ ಸ್ಥಾನವನ್ನು ಬೆಂಗಳೂರು ಮೂಲದ ಶಿಕ್ಷಣ ತಂತ್ರಜ್ಞಾನ ಮತ್ತು ಆನ್‌ಲೈನ್ ಟ್ಯುಟೋರಿಯಲ್ ಸಂಸ್ಥೆಯಾದ ಬೈಜೂಸ್ ಅಲಂಕರಿಸಲಿದೆ.
2017ರಲ್ಲಿ ತಾನು ಖರೀದಿಸಿದ ಜೆರ್ಸಿ ಹಕ್ಕು ಅತ್ಯಂತ ದುಬಾರಿ ಮತ್ತು ಸುಸ್ಥಿರವಲ್ಲ ಎಂದು ಮನವರಿಕೆಯಾದ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಹಿಂದೆ ಸರಿಯಲು ಒಪ್ಪೋ ನಿರ್ಧರಿಸಿದ್ದು, ಜೆರ್ಸಿ ಹಕ್ಕನ್ನು ಬೈಜೂಸ್‌ಗೆ ಮರು ಹಂಚಿಕೆ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ.
ಎರಡು ವಾರಗಳಲ್ಲಿ ಈ ಬದಲಾವಣೆ ಸಾಧ್ಯತೆ ಇದ್ದು, ಭಾರತ ತಂಡದ ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಕೊನೆಯದಾಗಿ ಒಪ್ಪೋ ಕಾಣಿಸಿಕೊಳ್ಳಲಿದೆ. ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳುವ ವೇಳೆ ಟೀಂ ಇಂಡಿಯಾದ ಜೆರ್ಸಿಯಲ್ಲಿ ಬೈಜೂಸ್ ಸ್ಥಾನ ಪಡೆದಿರುತ್ತದೆ. ಈ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಹಿಂದೆ ನಿಗದಿಪಡಿಸಿದ ದರದಲ್ಲೇ ಬೈಜೂಸ್ ಈ ಹಕ್ಕನ್ನು ಹೊಂದಲಿದ್ದು, ಇಡೀ ಒಪ್ಪಂದದ ಅವಧಿಗೆ ತಾಂತ್ರಿಕವಾಗಿ ಯಾವುದೇ ನಷ್ಟ ಉಂಟಾಗುವುದಿಲ್ಲ. 2022ರ ಮಾರ್ಚ್ 31ರವರೆಗೆ ಈ ಒಪ್ಪಂದ ಚಾಲ್ತಿಯಲ್ಲಿರುತ್ತದೆ.
ಒಪ್ಪೋ ತನ್ನ ನಷ್ಟವನ್ನು ಕಡಿತಗೊಳಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ. ಅವರು ಈ ಹಕ್ಕನ್ನು ಬೈಜೂಸ್‌ಗೆ ಮರು ನಿಯೋಜಿಸಿದ್ದಾರೆ. ಬೈಜೂಸ್ ಬಿಸಿಸಿಐಗೆ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಲು ಅನುಕೂಲವಾಗುವಂತೆ ಸಣ್ಣ ಮೊತ್ತವನ್ನು ಬೈಜೂಸ್‌ಗೆ ಅದು ನೀಡಲಿದೆ. ವಾಸ್ತವವಾಗಿ ಏನು ಪಡೆಯಬೇಕೋ ಅದನ್ನು ಮಂಡಳಿ ಪಡೆಯಲಿದೆ" ಎಂದು ಹೇಳಿವೆ.







