ವಾಸ್ ಲೇನ್: ರಸ್ತೆಯಲ್ಲಿ ಶೇಖರಗೊಳ್ಳುತ್ತಿದೆ ಕೊಳಚೆ ನೀರು; ಸ್ಥಳೀಯರಲ್ಲಿ ರೋಗ ಭೀತಿ

ಮಂಗಳೂರು, ಜು.25: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ವಾಸ್ ಲೇನ್ ನಲ್ಲಿ ಅಸಮರ್ಪಕ ಚರಂಡಿ ಅವ್ಯವಸ್ಥೆಯಿಂದಾಗಿ ಕೊಳಚೆ ನೀರು ರಸ್ತೆಯಲ್ಲೇ ಹರಿದು ಮನೆಯಂಗಳವನ್ನು ಸೇರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಾಸ್ ಲೇನ್ ತಗ್ಗು ಪ್ರದೇಶವಾದುದರಿಂದ ಬೇರೆ ಬೇರೆ ಕಡೆಯಿಂದ ಹರಿದು ಬರುವ ಕೊಳಚೆ ನೀರು ಚರಂಡಿಯಲ್ಲಿ ಶೇಖರಣೆಗೊಳ್ಳುತ್ತಿದೆ. ಈ ಕೊಳಚೆ ನೀರು ಮ್ಯಾನ್‌ಹೋಲ್ ಮೂಲಕ ರಸ್ತೆ ಮೂಲಕ ಹರಿಯುತ್ತಿದ್ದು, ಮಳೆ ಬಂದಾಗ ಮನೆ ಬಾಗಿಲಿಗೆ ಬಂದು ನಿಲುತ್ತದೆ. ಇದು ಸ್ಥಳೀಯವಾಗಿ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಕಾಲೇಜಿಗೆ ಹೊಗುವ ವಿದ್ಯಾರ್ಥಿಗಳು, ಹಾಗೂ ಮಸೀದಿ-ಮಂದಿರಗಳಿಗೆ ಹೋಗುವವರು ಈ ಕೊಳಚೆ ತ್ಯಾಜ್ಯವನ್ನು ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಸುಮಾರು 10 ವರ್ಷಗಳಿಂದ ಸ್ಥಳೀಯ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ನಿವಾಸಿಗಳಾದ ನಿವೃತ್ತ ಅರಣ್ಯ ಅಧಿಕಾರಿ ಗೋಪಾಲ್ ಶೆಣೈ, ಮುಹಮ್ಮದ್ ಕುಂಞಿ, ರತ್ನಾಕರ್, ಅರವಿಂದ್ ರಾವ್, ಸಹೂದ್, ಕೈಝರ್, ಅಫ್ತರ್ ಹುಸೈನ್ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.











