ಸರಕಾರ ರಚನೆಗೆ ಇನ್ನೂ ಸಿಗದ ಒಪ್ಪಿಗೆ: ರಾಜ್ಯ ಬಿಜೆಪಿ ಪಾಳಯದಲ್ಲಿ ಆತಂಕದ ಕಾರ್ಮೋಡ

ಬೆಂಗಳೂರು, ಜು.25: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಂಡಿದ್ದರೂ, ಈವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸರಕಾರ ರಚನೆ ಮಾಡಲು ಕೇಂದ್ರ ಬಿಜೆಪಿ ನಾಯಕತ್ವ ಅನುಮತಿ ನೀಡದೆ ಇರುವುದು, ರಾಜ್ಯ ಬಿಜೆಪಿ ಪಾಳಯದಲ್ಲಿ ಆತಂಕದ ಕಾರ್ಮೋಡ ಆವರಿಸಿಕೊಳ್ಳುವಂತೆ ಮಾಡಿದೆ.
ಎಚ್.ಡಿ.ಕುಮಾರಸ್ವಾಮಿ ಜು.23ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಲು ಸಾಧ್ಯವಾಗದೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ರಾಜ್ಯಪಾಲರು ಸರಕಾರ ರಚನೆಗೆ ತಮ್ಮನ್ನು ಆಹ್ವಾನಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಯಡಿಯೂರಪ್ಪ ಇದ್ದರು. ಆದರೆ, ಈವರೆಗೆ ಕೇಂದ್ರದ ಬಿಜೆಪಿ ನಾಯಕತ್ವವಾಗಲಿ, ರಾಜ್ಯಪಾಲರಾಗಲಿ ಆಹ್ವಾನ ನೀಡದೆ ಇರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಸರಕಾರ ರಚನೆಗೆ ಅವಕಾಶ ನೀಡುವಂತೆ ಕೋರಿ ಬಿಜೆಪಿ ಶಾಸಕ ಮಾಧುಸ್ವಾಮಿ ನೇತೃತ್ವದ ನಿಯೋಗವು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಗಾಗಿ ಹೊಸದಿಲ್ಲಿಗೆ ತೆರೆಳಿದೆ. ಆದರೆ, ಲೋಕಸಭೆಯ ಕಲಾಪದಲ್ಲಿ ತಲ್ಲೀನರಾಗಿರುವ ಅಮಿತ್ ಶಾ, ರಾಜ್ಯ ನಾಯಕರೊಂದಿಗೆ ಭೇಟಿಯಾಗಿ ಎರಡು ಬಾರಿ ಸಮಯ ನಿಗದಿ ಮಾಡಿದ್ದರೂ, ಭೇಟಿ ಸಾಧ್ಯವಾಗಿರಲಿಲ್ಲ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 15 ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತೀರ್ಮಾನ ಕೈಗೊಳ್ಳುವವರೆಗೆ ಸರಕಾರ ರಚನೆಗೆ ಮುಂದಾಗುವುದು ಬೇಡ ಎಂಬ ಪರೋಕ್ಷ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರವಾನಿಸಿದೆ ಎನ್ನಲಾಗುತ್ತಿದೆ.
ವಿಧಾನಸಭೆಯಲ್ಲಿ ಬಿಜೆಪಿ ಸರಕಾರ ಬಹುಮತ ಸಾಬೀತುಪಡಿಸುವ ವೇಳೆ ಅತೃಪ್ತರು ಏನಾದರೂ ಸರಕಾರದ ವಿರುದ್ಧ ಮತ ಚಲಾಯಿಸಿದರೆ, ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗುವುದು ಸತ್ಯ. ಆದುದರಿಂದ, ತರಾತುರಿಯಲ್ಲಿ ಸರಕಾರ ರಚನೆ ಮಾಡಿ, ನಂತರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ ಎಂದು ಹೇಳಲಾಗುತ್ತಿದೆ.
ಸ್ಪೀಕರ್ ರಮೇಶ್ ಕುಮಾರ್ ಇಂದು ವಿಧಾನಸೌಧದಲ್ಲಿ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ವಿಚಾರದ ಕುರಿತು ಅಧಿಕಾರಿಗಳ ಜೊತೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ. ನಾಳೆ ಸಂಜೆ ವೇಳೆಗೆ ಸ್ಪೀಕರ್ ಶಾಸಕರ ರಾಜೀನಾಮೆ ಕುರಿತು ತಮ್ಮ ತೀರ್ಮಾನ ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಅತೃಪ್ತ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರೆ, ಸದ್ಯಕ್ಕೆ ಅವರು ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲು ಕಾನೂನಿನ ತೊಡಕು ಎದುರಾಗಲಿದೆ. ಶಾಸಕರು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೊರೆ ಹೋಗಿ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಒಂದು ವೇಳೆ ಸ್ಪೀಕರ್ ರಾಜೀನಾಮೆ ಅಂಗೀಕರಿಸಿದರೆ, ಮತ್ತೊಮ್ಮೆ ಈ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಎಲ್ಲ ಅತೃಪ್ತ ಶಾಸಕರಿಗೂ ಬಿಜೆಪಿ ಟಿಕೆಟ್ ನೀಡಲಿದೆಯೇ? ಸ್ಥಳೀಯ ಮಟ್ಟದಲ್ಲಿ ಎದುರಾಗಬಹುದಾದ ಬಂಡಾಯವನ್ನು ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ, ಪಕ್ಷಕ್ಕೆ ದ್ರೋಹ ಬಗೆದು, ನಮ್ಮ ಬೆನ್ನಿಗೆ ಚೂರಿ ಹಾಕಿ ಹೋಗಿರುವ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲುಣಿಸಲು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪಣ ತೊಟ್ಟಿರುವುದು ಅತೃಪ್ತ ಶಾಸಕರಲ್ಲಿ ಆತಂಕ ಮನೆ ಮಾಡುವಂತಾಗಿದೆ.







