ಆಟೊಮೊಬೈಲ್ ಕ್ಷೇತ್ರದ ಬಿಕ್ಕಟ್ಟು ಮುಂದುವರಿದರೆ 10 ಲಕ್ಷ ಉದ್ಯೋಗ ನಷ್ಟ: ಬಿಡಿಭಾಗ ತಯಾರಕರ ಎಚ್ಚರಿಕೆ

ಹೊಸದಿಲ್ಲಿ,ಜು.25: ವಾಹನಗಳ ಮಾರಾಟದಲ್ಲಿ ಮಂದಗತಿ ಮುಂದುವರಿದರೆ ಒಂದು ಲಕ್ಷ ಉದ್ಯೋಗಿಗಳನ್ನು ಕೈಬಿಡುವುದು ವಾಹನ ಬಿಡಿಭಾಗಗಳ ತಯಾರಕರಿಗೆ ಅನಿವಾರ್ಯವಾಗುತ್ತದೆ ಎಂದು ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಸಂಘ(ಎಸಿಎಂಎ)ವು ಎಚ್ಚರಿಕೆ ನೀಡಿದೆ.
ಹಾಲಿ ವಾಹನ ಬಿಡಿಭಾಗಗಳ ತಯಾರಿಕೆ ಕ್ಷೇತ್ರದಲ್ಲಿ 50 ಲಕ್ಷ ಜನರು ದುಡಿಯುತ್ತಿದ್ದಾರೆ.
ಭಾರತದ ವಾಹನ ತಯಾರಿಕೆ ಉದ್ಯಮವು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು,ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.18.4ರಷ್ಟು ಕುಸಿತ ದಾಖಲಾಗಿದೆ. ಮಾಸಿಕ ಪ್ರಯಾಣಿಕ ವಾಹನಗಳ ಮಾರಾಟ ಜೂನ್ ನಲ್ಲಿ ಕಳೆದ 18 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಕುಸಿತವನ್ನು ಕಂಡಿದೆ. ಆಟೊಮೊಬೈಲ್ ಕ್ಷೇತ್ರದಲ್ಲಿಯ ಬಿಕ್ಕಟ್ಟಿನಿಂದಾಗಿ ವಾಹನಗಳ ತಯಾರಕರು ತಮ್ಮ ಉತ್ಪಾದನೆಯನ್ನು ಕಡಿತಗೊಳಿಸಿದ್ದಾರೆ, ಜೊತೆಗೆ ಈ ಉದ್ಯಮಗಳು ಮತ್ತು ವಾಹನ ಬಿಡಿಭಾಗಗಳ ತಯಾರಿಕೆ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನೂ ಕಡಿಮೆಗೊಳಿಸುತ್ತಿವೆ.
ವಾಹನಗಳ ಉತ್ಪಾದನೆಯನ್ನು ಕಡಿತಗೊಳಿಸಿರುವುದು ಬಿಡಿಭಾಗಗಳ ತಯಾರಿಕೆ ಕ್ಷೇತ್ರದಲ್ಲಿ ಬಿಕ್ಕಟ್ಟಿನಂತಹ ಸ್ಥಿತಿಗೆ ಕಾರಣವಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ 10 ಲಕ್ಷ ಉದ್ಯೋಗಿಗಳನ್ನು ಕೈಬಿಡುವ ಅನಿವಾರ್ಯತೆ ಉಂಟಾಗಲಿದೆ ಎಂದು ಎಸಿಎಂಎ ಅಧ್ಯಕ್ಷ ರಾಮ ವೆಂಕಟರಮಣಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸರಕಾರದ ವಿದ್ಯುತ್ ವಾಹನಗಳ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯಿದೆ, ಇದರಿಂದಾಗಿ ವಾಹನ ಕ್ಷೇತ್ರದಲ್ಲಿ ಹೂಡಿಕೆಗಳು ಸ್ಥಗಿತಗೊಂಡಿವೆ ಎಂದ ಅವರು,ವಿದ್ಯುತ್ ವಾಹನಗಳು ಶೀಘ್ರ ಮಾರುಕಟ್ಟೆಗೆ ಬರುವಂತಾಗಲು ಸರಕಾರದ ಯೋಜನೆಯು ಭಾರತದ ಆಮದನ್ನು ಹೆಚ್ಚಿಸಲಿದೆ ಮತ್ತು ದೇಶಿಯ ಬಿಡಿಭಾಗ ತಯಾರಕರ ಭವಿಷ್ಯವನ್ನು ಹಾಳು ಮಾಡಲಿದೆ ಎಂದರು.
ವಾಹನಗಳು ಮತ್ತು ವಾಹನ ಬಿಡಿಭಾಗಗಳ ಮೇಲಿನ ಜಿಎಸ್‌ಟಿ ದರವನ್ನು ತಗ್ಗಿಸುವಂತೆಯೂ ಅವರು ಸರಕಾರವನ್ನು ಆಗ್ರಹಿಸಿದರು.







