ಜೀವನದಲ್ಲಿ ನಿಜವಾದ ಸಂತೋಷ ಸಿಗಲು ಸಾಹಿತ್ಯ ಕೃತಿ ಓದಿ: ಮೊಗಸಾಲೆ
ನಾ.ಮೊಗಸಾಲೆ ಸಾಹಿತ್ಯ ವಿಹಾರ ಕಾರ್ಯಕ್ರಮ

ಉಡುಪಿ, ಜು.25: ಕನ್ನಡದಲ್ಲಿ ಹಿಮಾಲಯದ ಎತ್ತರದಷ್ಟು ಸಾಹಿತ್ಯ ಸಂಪತ್ತಿದೆ. ಅವುಗಳನ್ನು ಓದಿ. ಜೀವನದಲ್ಲಿ ನಿಜವಾದ ಸಂತೋಷ ಸಿಗುವುದು ಉತ್ತಮ ಸಾಹಿತ್ಯ ಕೃತಿಗಳನ್ನು ಓದಿದಾಗ ಹಾಗೂ ಉತ್ತಮ ಸಾಹಿತ್ಯ ಕೃತಿಯೊಂದನ್ನು ರಚಿಸಿದಾಗ ಎಂದು ಕನ್ನಡದ ಖ್ಯಾತ ಕಾದಂಬರಿಕಾರ, ಸಾಹಿತಿ ಡಾ.ನಾ.ಮೊಗಸಾಲೆ ಅಭಿಪ್ರಾಯಪಟ್ಟಿದ್ದಾರೆ.
ಕಾಂತಾವರದ ಮೊಗಸಾಲೆ 75 ಅಭಿನಂದನ ಸಮಿತಿಯ ಸಹಯೋಗದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ಕನ್ನಡ ವಿಭಾಗವು ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಕನ್ನಡದ ಖ್ಯಾತನಾಮ ಸಾಹಿತಿ ಡಾ.ನಾ.ಮೊಗಸಾಲೆ ಅವರ 75ನೇ ವರ್ಷದ ಸಂಭ್ರಮದಂಗವಾಗಿ ಆಯೋಜಿಸಿದ್ದ ‘ಮೊಗಸಾಲೆ ಸಾಹಿತ್ಯ ವಿಹಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿಗಳಲ್ಲಿ, ಯುವಜನಾಂಗದಲ್ಲಿ ಸಾಹಿತ್ಯ ಪ್ರೀತಿ ಇಂದು ಹಿಂದಿನಂತಿಲ್ಲ. ಆದರೂ ಯುವಕರಿಗಿಂತ ಯುವತಿಯರೇ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಎನಿಸುತ್ತದೆ. ಇಂದು ಮಹಿಳೆಯರೇ ಹೆಚ್ಚು ವೌಲ್ಯಯುತವಾದ ಕತೆ, ಕವನಗಳನ್ನು ರಚಿಸುತಿದ್ದಾರೆ ಎಂದವರು ನುಡಿದರು.
ಮೂಲತ: ನನ್ನಲ್ಲಿ ಕವಿ ಅಥವಾ ಸಾಹಿತಿಯಾಗುವ ಯಾವುದೇ ಭ್ರಮೆಗಳಿರ ಲಿಲ್ಲ. ಸಾಹಿತ್ಯ ಕ್ಷೇತ್ರಕ್ಕೆ ಯಾಕೆ ಬಂದೆ ಎಂಬುದೂ ನನಗೆ ಗೊತ್ತಿಲ್ಲ. ಸಾಹಿತ್ಯ ಹಾಗೂ ಆಯುರ್ವೇದ ಕ್ಷೇತ್ರಗಳೆರಡೂ ನನಗೆ ಅನಾಚಿತವಾಗಿ ಒಲಿದಿದೆ. ಸಂದರ್ಭ ಬಂದಾಗ ನಾನು ಕುದುರೆ ಹತ್ತಿದೆ. ಅದು ನನ್ನನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಸಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು ನನಗೆ ಲಾಭವಾಗಿದೆ. ನಿಮ್ಮೆಳಗಿನ, ಯಾರಿಗೂ ಹೇಳಲಾಗದ ಕೆಲವು ನೋವು, ತುಡಿತಗಳನ್ನು ನೀವು ಅಕ್ಷರರೂಪಕ್ಕಿಳಿಸಲು ಸಾಧ್ಯವಿದೆ. ಇವುಗಳಿಗೆ ಬೇರೆ ಬೇರೆ ವಿಷಯಗಳನ್ನು ಸೇರಿಸಿ ನಾನು ಕಾದಂಬರಿಗಳನ್ನು ಬರೆದೆ. ನನ್ನ ‘ಮುಖಾಂತರ’ ಹಾಗೂ ‘ಉಲ್ಲಂಘನೆ’ ಬೃಹತ್ ಕಾದಂಬರಿಗಳು ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಇದು ನನಗೆ ಸಾರ್ಥಕ್ಯದ ಭಾವವನ್ನು ನೀಡಿದೆ ಎಂದು ಡಾ.ನಾ.ಮೊಗಸಾಲೆ ನುಡಿದರು.
ಅನಿರೀಕ್ಷಿತವಾಗಿ ನಾನು ಸಾಹಿತ್ಯ ಹಾಗೂ ಆಯುರ್ವೇದ ಕ್ಷೇತ್ರಕ್ಕೆ ಬಂದರೂ, ಎರಡಕ್ಕೂ ನ್ಯಾಯವನ್ನು ಸಲ್ಲಿಸಿದ್ದೇನೆ, ಕೆಲಸವನ್ನು ಬದ್ಧತೆಯಿಂದ ಮಾಡಿದ್ದೇನೆ. ಸಾಹಿತ್ಯ, ವೈದ್ಯಕೀಯ ಹಾಗೂ ಸಂಘಟನೆ ನನಗೆ ಬದುಕಿನ ಭಾಗಗಳಾಗಿವೆ, ಅವುಗಳಿಗೆಲ್ಲಾ ನ್ಯಾಯಸಲ್ಲಿಸಿದ ವಿಶ್ವಾಸವಿದೆ ಎಂದರು. ಕೊನೆಯಲ್ಲಿ ಅವರು ತನ್ನ ಎರಡು ಪ್ರಮುಖ ಕವನಗಳನ್ನು ವಾಚಿಸಿದರು.
ಖ್ಯಾತ ಲೇಖಕ, ವಿದ್ವಾಂಸ ಡಾ.ಎನ್.ಟಿ.ಭಟ್ ಅವರು ‘ಮೊಗಸಾಲೆಯವರ ಮುಖಾಂತರ’ ಹಾಗೂ ಸಾಹಿತಿ ಅಂಶುಮಾಲಿ ‘ವಾಮನನಿಂದ ತ್ರಿವಿಕ್ರಮ: ಮೊಗಸಾಲೆ’ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಬಳಿಕ ನಾ. ಮೊಗಸಾಲೆ ಅವರೊಂದಿಗೆ ಸಂವಾದ ನಡೆಯಿತು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಕಾಂತಾವರ ಮೊಗಸಾಲೆ 75 ಅಭಿನಂದನ ಸಮಿತಿಯ ಸಂಚಾಲಕ ಹಿರಿಯ ಸಾಹಿತಿ ಡಾ.ಜನಾರ್ದನ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತು ವಸಂತ ಕುಮಾರ್ ಸ್ವಾಗತಿಸಿದರೆ, ಕನ್ನಡ ಉಪನ್ಯಾಸಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ಸದಾನಂದ ನಾರಾವಿ ವಂದಿಸಿದರು.
ಕಾಂತಾವರ ಕನ್ನಡ ಸಂಘ ಹುಟ್ಟಿದ ಬಗೆ
ಕಾಂತಾವರದಂತ ಗ್ರಾಮೀಣ ಪ್ರದೇಶದಲ್ಲಿದ್ದು, ಇಡೀ ರಾಜ್ಯ ಗಮನ ಸೆಳೆಯುವಂಥ ಕನ್ನಡ ಕೈಂಕರ್ಯದ ಮೂಲಕ ಕಾಂತಾವರದ ಹೆಸರು ಪ್ರಜ್ವಲಿಸುವಂತೆ ಮಾಡಿದ ಕಾಂತಾವರ ಕನ್ನಡ ಸಂಘ ಪ್ರಾರಂಭಗೊಂಡ ಹಿನ್ನೆಲೆಯನ್ನು ಡಾ.ನಾ.ಮೊಗಸಾಲೆ ಬಿಚ್ಚಿಟ್ಟದ್ದು ಹೀಗೆ.
ಆಯುರ್ವೇದ ವೈದ್ಯನಾಗಿ ನಾನು ಕಾಂತಾವರಕ್ಕೆ ಬಂದಾಗ ಇದೊಂದು ಹಳ್ಳಿಯಾಗಿತ್ತು. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ. ಪ್ರಾಥಮಿಕ ಶಾಲೆಯೊಂದು ಇಲ್ಲಿತ್ತು. ಹಳ್ಳಿಯಲ್ಲಿ ಚಟುವಟಿಕೆಗಾಗಿ ಅಲ್ಲಿನ ಅಧ್ಯಾಪಕರನ್ನು ಸೇರಿಸಿ ಯುವಕ ಮಂಡಲವೊಂದನ್ನು ಸ್ಥಾಪಿಸಿದೆ. ಯುವಕ ಮಂಡಲದ ಮೂಲಕ ಒಳ್ಳೆಯ ಕೆಲಸ ಮಾಡಿದ್ದೆವು.
ಆದರೆ 15 ವರ್ಷದ ಒಳಗೆ ಅಲ್ಲಿ ರಾಜಕೀಯ ಶುರುವಾಯಿತು. ಅವ್ಯವಹಾರದ ಆರೋಪವೂ ಬಂತು. ಇದರಿಂದ ಬೇಸತ್ತು ನಾನು ಹೊರಬಂದೆ. ಆಗ ಪಕ್ಕದ ಬೇಲಾಡಿಯಲ್ಲಿ ಅತ್ಯುತ್ತಮ ಕನ್ನಡ ಶಾಲೆಯೊಂದಿತ್ತು. ಒಳ್ಳೆಯ ಅಧ್ಯಾಪಕರು ಅಲ್ಲಿದ್ದರು. ಶೈಕ್ಷಣಿಕ, ಸಾಂಸ್ಕೃತಿಕವಾಗಿ ಶಾಲೆಗೆ ಒಳ್ಳೆಯ ಹೆಸರಿತ್ತು. ಹೀಗಾಗಿ ಬೇಲಾಡಿ ಶಾಲೆಯಲ್ಲಿ ಒಂದಿಷ್ಟು ಜನರೊಂದಿಗೆ ಸೇರಿ 1976ರ ಮಾ.26ರಂದು ಕಾಂತಾವರ ಕನ್ನಡ ಸಂಘದ ಉದಯವಾಯಿತು. ಕನ್ನಡದ ಕುರಿತಂತೆ ಹಲವು ಚಟುವಟಿಕೆಯ ಅದು ಮೂಲಕ ಗಮನ ಸೆಳೆಯಿತು.
ಕನ್ನಡ ಸಂಘಕ್ಕೆ 25 ವರ್ಷಗಳಾದಾಗ ಕನ್ನಡ ಭವನದ ಸ್ಥಾಪನೆಗೆ ಮುಂದಾದೆವು. ಜಿನರಾಜ ಹೆಗ್ಡೆ ಶತಮಾನೋತ್ಸವ ಸಮಿತಿಯ ಮೂಲಕ ಕಾಂತಾವರದಲ್ಲಿ ಕನ್ನಡ ಭವನದ ನಿರ್ಮಾಣವಾಯಿತು. ಅದು ಕನ್ನಡ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆದಿದೆ ಎಂದರು.









