ಉಡುಪಿಯಲ್ಲಿ ಇಗ್ನೋದ ಅಧ್ಯಯನ ಕೇಂದ್ರ ಪ್ರಾರಂಭ
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಲ್ಲಿ ಎಂಟು ಹೊಸ ಕೋರ್ಸ್
ಉಡುಪಿ, ಜು.25: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಬೆಂಗಳೂರು ಪ್ರಾದೇಶಿಕ ಕೇಂದ್ರವು ಅಜ್ಜರಕಾಡಿನಲ್ಲಿರುವ ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿದೆ ಎಂದು ಇಗ್ನೋದ ಬೆಂಗಳೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಜಿ.ಎಚ್. ಇಮ್ರಾಪೂರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ದೂರಶಿಕ್ಷಣದ ಮೂಲಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಅಧ್ಯಯನ ನಡೆಸಬಹುದಾಗಿದೆ. ಅಲ್ಲದೇ ಇಲ್ಲಿ ಸರ್ಟಿಫಿಕೇಟ್ ಹಾಗೂ ಪಿಜಿ ಸರ್ಟಿಫಿಕೇಟ್ ಕೋರ್ಸುಗಳೂ ಇದ್ದು, ಆಸಕ್ತರಿಗೆ ಅರ್ಜಿ ಸಲ್ಲಿಸಲು ಜು.31ರವರೆಗೆ ಕಾಲಾವಕಾಶವಿದೆ ಎಂದವರು ನುಡಿದರು.
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಜಗತ್ತಿನ ಅತ್ಯಂತ ದೊಡ್ಡ ದೂರಶಿಕ್ಷಣ ನೀಡುವ ವಿವಿ ಆಗಿದೆ. ಇದರಲ್ಲಿ ಕಲಿಕೆಗೆ ಒಟ್ಟು 32 ಲಕ್ಷ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟ ಯಾರೇ ಆದರೂ ಇದರಲ್ಲಿ ಕಲಿಕೆಗೆ ಹೆಸರು ನೊಂದಾಯಿಸಿ ಕೊಳ್ಳಬಹುದು ಎಂದು ಇಮ್ರಾಪೂರ್ ವಿವರಿಸಿದರು.
ಇಗ್ನೋಕ್ಕೆ ದೇಶದಲ್ಲಿ 67 ಪ್ರಾದೇಶಿಕ ಕೇಂದ್ರಗಳು, 3430 ಅಧ್ಯಯನ ಕೇಂದ್ರಗಳು, 21ಕಲಿಕಾ ಕೇಂದ್ರಗಳಿವೆ. ಇದರಲ್ಲಿ ಒಟ್ಟು 241 ಅಧ್ಯಯನ ವಿಷಯ (ಪ್ರೋಗ್ರಾಂ)ಗಳಿವೆ. 11ಡಿಗ್ರಿ, 32 ಮಾಸ್ಟರ್ ಡಿಗ್ರಿ, 13 ಡಿಪ್ಲೋಮ, 27 ಸರ್ಟಿಫಿಕೇಟ್ ಪ್ರೋಗ್ರಾಂಗಳಿವೆ. 2018-19ನೇ ಸಾಲಿನಲ್ಲಿ ಒಟ್ಟು 11.47 ಲಕ್ಷ ವಿದ್ಯಾರ್ಥಿಗಳು ಇದರಲ್ಲಿ ಕಲಿಕೆಗೆ ನೊಂದಾಯಿಸಿಕೊಂಡಿದ್ದಾರೆ ಎಂದರು.
ಈ ಬಾರಿಯಿಂದ ಇಗ್ನೋ ಎಂಟು ಹೊಸ ಸರ್ಟಿಫಿಕೇಟ್ ಕೋರ್ಸುಗಳನ್ನು ಪ್ರಾರಂಭಿಸಲಿದೆ. ಇವುಗಳಲ್ಲಿ ಯೋಗ, ಜಿಎಸ್‌ಟಿ ಕೋರ್ಸ್, ಕ್ಲೈಮೆಟ್ ಚೇಂಜ್, ಪರ್ಸಿಯನ್ ಭಾಷೆ ಹಾಗೂ ಆರೋಗ್ಯ ವಿಜ್ಞಾನದಲ್ಲಿ ನಾಲ್ಕು ಕೋರ್ಸ್‌ಗಳು ಸೇರಿವೆ ಎಂದರು.
ನಮ್ಮಲ್ಲಿ ಸರ್ಟಿಫಿಕೇಟ್, ಪದವಿ ಶಿಕ್ಷಣಗಳು ಉಚಿತವಾಗಿರುತ್ತವೆ. ಉನ್ನತ ಶಿಕ್ಷಣಕ್ಕೆ ವಿವಿ ನಿಯಮಾನುಸಾರ ಅತೀ ಕಡಿಮೆ ಶುಲ್ಕ ನಿಗದಿಯಾಗಿರುತ್ತದೆ. ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಪೂರ್ಣ ಉಚಿತ. ಇಗ್ನೋದಲ್ಲಿ ಪಡೆದ ಪದವಿಗೆ, ಉಳಿದ ವಿವಿಗಳ ಪದವಿಗಿರುವಷ್ಟೇ ಮಾನ್ಯತೆ ಭಾರತ ಹಾಗೂ ವಿದೇಶಗಳಲ್ಲಿ ಇರುತ್ತದೆ ಎಂದು ತಿಳಿಸಿದರು.
ಉಡುಪಿಯಲ್ಲಿ ಮಹಿಳಾ ಕಾಲೇಜಿನಲ್ಲಿ ಇದರ ಅಧ್ಯಯನ ಕೇಂದ್ರವಿದೆ. ಆಸಕ್ತರು ಜು.31ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಇಗ್ನೋ ಉಡುಪಿ ಕೇಂದ್ರದ ಸಂಯೋಜಕ ಶ್ರೀಧರ ಭಟ್ ತಿಳಿಸಿದರು. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.







