ಮನಪಾ ನೀರಿನ ದರ ಏರಿಕೆ ವಾಪಸಾತಿಗೆ ಡಿವೈಎಫ್‌ಐ ಆಗ್ರಹ
ಮಂಗಳೂರು, ಜು.25: ಮಂಗಳೂರು ಮಹಾನಗರ ಪಾಲಿಕೆಯು ಯಾವುದೇ ಮುನ್ಸೂಚನೆ ಇಲ್ಲದೆ 2019ರ ಎಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ದರವನ್ನು ಐದಾರು ಪಟ್ಟು ಏರಿಕೆ ಮಾಡಿದ್ದು, ಕೂಡಲೇ ನೀರಿನ ದರ ಏರಿಕೆಯನ್ನು ವಾಪಸ್ ಪಡೆಯು ವಂತೆ ಜಿಲ್ಲಾಧಿಕಾರಿಯನ್ನು ಡಿವೈಎಫ್‌ಐ ಆಗ್ರಹಿಸಿದೆ.
ವಿಪರೀತ ನೀರಿನ ದರ ಏರಿಕೆ ನಗರದ ಜನಸಾಮಾನ್ಯರ ಪಾಲಿಗೆ ದೊಡ್ಡ ಹೊರೆಯಾಗಿದೆ. ಈ ರೀತಿಯ ಪೂರ್ವ ಸೂಚನೆಯಿಲ್ಲದ ವಿಪರೀತ ದರ ಏರಿಕೆಯನ್ನು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ದರ ಏರಿಕೆಯನ್ನು ವಾಪಸ್ ಪಡೆಯಲು ಆಗ್ರಹಿಸಿತು.
11 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಬಿಜೆಪಿ ಮಂಗಳೂರು ಪಾಲಿಕೆಯಲ್ಲಿ ಆಡಳಿತಕ್ಕೆ ಬಂದಾಗ ನೀರಿನ ದರವನ್ನು ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿ ಖಾಸಗೀಕರಣಕ್ಕೆ ಮುಂದಾಗಿತ್ತು. ಆ ಸಂದರ್ಭ ಡಿವೈಎಫ್‌ಐ, ಸಿಪಿಎಂ ನೇತೃತ್ವದಲ್ಲಿ ನಡೆದ ನಗರದ ಜನತೆಯ ತೀವ್ರತರದ ಪ್ರತಿಭಟನೆಯಿಂದಾಗಿ ದರ ಏರಿಕೆ, ಖಾಸಗೀಕರಣವನ್ನು ಪಾಲಿಕೆ ಹಿಂದಕ್ಕೆ ಪಡೆದಿತ್ತು. ಆ ನಂತರ ಈವರೆಗೆ ದರ ಏರಿಕೆ ಆಗಿರಲಿಲ್ಲ. ಆದರೆ ಈಗ ದರವನ್ನು ನಾಲ್ಕರಿಂದ ಐದು ಪಟ್ಟು ಏರಿಕೆ ಮಾಡಿರುವ ಕ್ರಮ ಸಲ್ಲದು. ದರ ಏರಿಕೆಯನ್ನು ಎಡಿಬಿ ಮುಂತಾದ ವಿದೇಶಿ ಬ್ಯಾಂಕ್ ಗಳ ನಿರ್ದೇಶನದ ಪ್ರಕಾರ ಮಾಡಲಾಗಿದೆ ಎಂದು ಡಿವೈಎಫ್‌ಐ ಆರೋಪಿಸಿದೆ.
ಈ ಹಿಂದೆ ತಿಂಗಳಿಗೆ 65 ರೂ. ಕನಿಷ್ಠ ದರ ನಿಗದಿ ಮಾಡಿ 25 ಸಾವಿರ ಲೀಟರ್ ನೀರು ನೀಡಲಾಗಿತ್ತು. ಆ ನಂತರದ ನೀರಿನ ಬಳಕೆಗೆ ಒಂದು ಸಾವಿರ ಲೀಟರ್ ನೀರಿಗೆ ಕೇವಲ ಮೂರು ರೂ. ದರ ವಿಧಿಸಲಾಗುತ್ತಿತ್ತು. ಆದರೆ ಈಗ ಕನಿಷ್ಠ ನೀರಿನ ಪ್ರಮಾಣವನ್ನು 25 ಸಾವಿರ ಲೀಟರ್ ನಿಂದ 8,000 ಲೀಟರ್‌ಗೆ ಇಳಿಸಲಾಗಿದೆ. ನಂತರದ ಬಳಕೆಗೆ ಲೀಟರ್‌ಗೆ ಮೂರು ರೂ.ಯಿಂದ 9-12 ರೂ.ಗೆ ಏರಿಕೆ ಮಾಡಲಾಗಿದೆ. ಈ ಏರಿಕೆ ಏಕಮುಖ ಹಾಗೂ ತೀರಾ ಜನವಿರೋಧಿಯಾಗಿದೆ ಎಂದು ಡಿವೈಎಫ್‌ಐ ದೂರಿದೆ.
ಕುಡಿಯುವ ನೀರಿಗೂ ತಿಂಗಳಿಗೆ ನೂರಾರು ರೂಪಾಯಿಯಿಂದ ಸಾವಿರ ರೂಪಾಯಿಗಿಂತಲೂ ಹೆಚ್ಚಿನ ದರ ಪ್ರತಿ ತಿಂಗಳು ಜನತೆ ಭರಿಸುವಂತಾ ಗುತ್ತದೆ. ವಿದೇಶಿ ಬ್ಯಾಂಕ್‌ಗಳ ಕರಾರುಗಳಿಗೆ ಕಣ್ಣುಮುಚ್ಚಿ ಸಹಿ ಹಾಕಿ ಬಡ ಜನತೆಯನ್ನು ಕುಡಿಯುವ ನೀರಿನಿಂದಲೂ ವಂಚಿಸುವುದನ್ನು ಯಾವ ಕಾರಣಕ್ಕೂ ಒಪ್ಪಲಾಗದು ಎಂದು ಡಿವೈಎಫ್‌ಐ ತಿಳಿಸಿದೆ.
ಜಿಲ್ಲಾಧಿಕಾರಿಯು ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಳ್ವಿಕೆ ಇಲ್ಲದ ಸಂದರ್ಭ ಬಳಸಿ, ಶಾಸಕರ ಗಮನಕ್ಕೂ ತಾರದೆ ಏರಿಕೆ ಮಾಡಿರುವುದು ಯಾವ ಕಾರಣಕ್ಕೂ ಒಪ್ಪಲಾಗದು. ಜಿಲ್ಲಾಡಳಿತ ತಕ್ಷಣ ದರ ಏರಿಕೆ ವಾಪಸ್ ಪಡೆಯಬೇಕು. ಜನಪ್ರತಿನಿಧಿಗಳು ಮಧ್ಯಪ್ರವೇಶಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







