ಕಂಕನಾಡಿ ತಾತ್ಕಾಲಿಕ ಮಾರುಕಟ್ಟೆ: ಹೊರಗಿನವರಿಗೆ ಅವಕಾಶ ನೀಡದಂತೆ ಆಗ್ರಹ

ಮಂಗಳೂರು,ಜು.25: ಕಂಕನಾಡಿಯ ಹಳೆಯ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವ ಸಲುವಾಗಿ ಕಂಕನಾಡಿ ಮೈದಾನದಲ್ಲಿ ನಿರ್ಮಿಸಲಾಗುವ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಹೊರಗಿನ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡದಂತೆ ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಆಗ್ರಹಿಸಿದೆ.
ಗುರುವಾರ ತಾತ್ಕಾಲಿಕ ಮಾರುಕಟ್ಟೆಗೆ ಆಗಮಿಸಿದ ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ ಅವರೊಂದಿಗೆ ಸಂಘದ ಪದಾಧಿಕಾರಿಗಳು ಚರ್ಚೆ ನಡೆಸಿ ಯಾವುದೇ ಕಾರಣಕ್ಕೂ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಹೊರಗಿನವರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬಾರದು. ಹಳೆಯ ಮಾರುಕಟ್ಟೆಯ 99 ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಅಂಗಡಿಗಳನ್ನು ನೀಡಬೇಕು. ಹಳೆಯ ಮಾರುಕಟ್ಟೆಯಲ್ಲಿ 2-3 ಅಂಗಡಿಗಳಿದ್ದವರಿಗೆ ತಾತ್ಕಾಲಿಕ ಮಾರುಕಟ್ಟೆಯಲ್ಲೂ 2-3 ಅಂಗಡಿ ನೀಡಬೇಕು. ಒಳಗಿನ ಗೋಡೆಯನ್ನು ಕೆಡವಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ತಾತ್ಕಾಲಿಕ ಮಾರುಕಟ್ಟೆಯನ್ನು ಆಗಸ್ಟ್ ಕೊನೆಯೊಳಗೆ ಬಿಟ್ಟುಕೊಡಬೇಕು, ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘದ ಮುಖಂಡರು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಅಲಿ ಹಸನ್ ಕುದ್ರೋಳಿ, ವಸಂತ ಟೈಲರ್, ರೋಶನ್ ಪತ್ರಾವೋ, ಮುಹಮ್ಮದ್ ಸಾಲಿ, ಸತ್ತಾರ್, ಕ್ಲೇರಾ ಮತ್ತಿತರರಿದ್ದರು.





