ದಿಢೀರ್ ವರ್ಗಾವಣೆ ನಂತರ ಹಣಕಾಸು ಕಾರ್ಯದರ್ಶಿ ಗರ್ಗ್ ರಿಂದ ಸ್ವಯಂ ನಿವೃತ್ತಿಗೆ ಅರ್ಜಿ

ಹೊಸದಿಲ್ಲಿ,ಜು.25: ಬುಧವಾರ ರಾತ್ರಿ ದಿಢೀರ್ ಆಗಿ ವಿದ್ಯುತ್ ಸಚಿವಾಲಯಕ್ಕೆ ವರ್ಗಾವಣೆಗೊಂಡಿರುವ ಹಣಕಾಸು ಕಾರ್ಯದರ್ಶಿ ಸುಭಾಷ್ಚಂದ್ರ ಗರ್ಗ್ ಅವರು ತನ್ನ ಅಧಿಕೃತ ಸೇವಾ ನಿವೃತ್ತಿಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿಯನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೇಂದ್ರವು ಅವರ ಅರ್ಜಿಯನ್ನು ಪುರಸ್ಕರಿಸಿದರೆ ಅವರು ಸುಮಾರು ಎರಡು ದಶಕಗಳ ಅವಧಿಯಲ್ಲಿ ಹುದ್ದೆಯನ್ನು ತೊರೆದ ಇಂತಹ ಮೊದಲ ಅಧಿಕಾರಿಯಾಗಲಿದ್ದಾರೆ.
ಗರ್ಗ್ ಅವರು ಮುಂದಿನ ಕೆಲವು ತಿಂಗಳುಗಳಲ್ಲಿ ಸಾಕಾರಗೊಳ್ಳಲಿರುವ ಹಲವಾರು ಸರಕಾರಿ ಉಪಕ್ರಮಗಳಲ್ಲಿ ನಿಕಟವಾಗಿ ಮತ್ತು ವೈಯಕ್ತಿಕವಾಗಿ ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿದ್ಯುತ್ ಸಚಿವಾಲಯಕ್ಕೆ ಎತ್ತಂಗಡಿಗೊಳಿಸುವ ನಿರ್ಧಾರ ಅವಸರದ್ದಾಗಿದೆ ಎಂದು ಪರಿಗಣಿಸಲಾಗುತ್ತಿದೆ. ಹಾಲಿ ಹೂಡಿಕೆ ಮತ್ತು ಸರಕಾರಿ ಆಸ್ತಿ ನಿರ್ವಹಣೆ ವಿಭಾಗದ ಕಾರ್ಯದರ್ಶಿಯಾಗಿರುವ ಅತನು ಚಕ್ರವರ್ತಿ ಅವರನ್ನು ಗರ್ಗ್ ಹುದ್ದೆಗೆ ನೇಮಕಗೊಳಿಸಲಾಗಿದೆ.
ಗರ್ಗ್ ಅವರು ವಿದ್ಯುತ್ ಸಚಿವಾಲಯದಲ್ಲಿನ ತನ್ನ ನೂತನ ಹುದ್ದೆಯಲ್ಲಿ ಹಿಂದಿನ ವೇತನ ಮತ್ತು ಸೌಲಭ್ಯಗಳನ್ನೇ ಪಡೆಯುತ್ತಾರಾದರೂ ಇದನ್ನು ಹಿಂಭಡ್ತಿ ಎಂದೇ ವ್ಯಾಪಕವಾಗಿ ನೋಡಲಾಗುತ್ತಿದೆ. ಸಾಮಾನ್ಯವಾಗಿ ವಿತ್ತ ಕಾರ್ಯದರ್ಶಿಯನ್ನು ಗೃಹ ಅಥವಾ ರಕ್ಷಣೆಯಂತಹ ಪ್ರತಿಷ್ಠಿತ ಸಚಿವಾಲಯಗಳಿಗೆ ವರ್ಗಾಯಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ವಿತ್ತ ಸಚಿವಾಲಯದ ಪ್ರಮುಖ ಅಧಿಕಾರಿಗಳನ್ನು ನಿವೃತ್ತಿಯ ಬಳಿಕ ಚುನಾವಣಾ ಆಯೋಗ,ಹಣಕಾಸು ಆಯೋಗ ಅಥವಾ ಸಿಎಜಿಯಲ್ಲಿ ಉನ್ನತ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಗೊಳಿಸ ಲಾಗುತ್ತದೆ.
ಈ ಹಿಂದೆ 2014ರಲ್ಲಿ ವಿತ್ತ ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಅರವಿಂದ ಮಾಯಾರಾಮ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ಕೇವಲ ಐದು ತಿಂಗಳಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ಎತ್ತಂಗಡಿ ಮಾಡಲಾಗಿತ್ತು.







