ಮಕ್ಕಳ ಅತ್ಯಾಚಾರ: ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ರಚಿಸಿ; ಕೇಂದ್ರಕ್ಕೆ ಸುಪ್ರೀಂ ತಾಕೀತು

ಹೊಸದಿಲ್ಲಿ, ಜು.25: ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಬಾಕಿಯಿರುವ ಪ್ರಕರಣಗಳನ್ನು ಆಲಿಸಲು ವಿಶೇಷ ನಿಯೋಜಿತ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ನೂರಕ್ಕೂ ಅಧಿಕ ಮಕ್ಕಳ ಅತ್ಯಾಚಾರ ಪ್ರಕರಣಗಳು ಬಾಕಿಯುಳಿದಿರುವ ಜಿಲ್ಲೆಗಳಲ್ಲಿ ಇಂತಹ ವಿಶೇಷ ನ್ಯಾಯಾಲಯಗಳನ್ನು ರಚಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.
ಪ್ರತ್ಯೇಕ ನ್ಯಾಯಾಲಯಗಳ ನಿರ್ಮಾಣಕ್ಕೆ ನಿಧಿಯನ್ನು ಒದಗಿಸುವಂತೆ ಕೇಂದ್ರಕ್ಕೆ ಸೂಚಿಸಿರುವ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಈ ನ್ಯಾಯಾಲಯಗಳನ್ನು ಸ್ಥಾಪಿಸಲು 60 ದಿನಗಳ ಗಡುವು ವಿಧಿಸಿದೆ. ಈ ಆದೇಶದ ಅನುಸರಣೆಯ ಸ್ಥಿತಿಯನ್ನು ಮೂವತ್ತು ದಿನಗಳ ನಂತರ ನ್ಯಾಯಾಲಯಕ್ಕೆ ಒದಗಿಸಲು ಪೀಠ ತಿಳಿಸಿದೆ. ಮಕ್ಕಳ ಅತ್ಯಾಚಾರ ಪ್ರಕರಣಗಳಲ್ಲಿ ಉಂಟಾಗಿರುವ ಏರಿಕೆಗಾಗಿ ಮುಖ್ಯ ನ್ಯಾಯಾಧೀಶರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಓರ್ವ ನ್ಯಾಯಾಧೀಶ ಪೋಕ್ಸೊ ಕಾಯ್ದೆಯಡಿ ದಾಖಲಾಗುವ 400 ಪ್ರಕರಣಗಳನ್ನು ನಿಬಾಯಿಸಬೇಕಾಗುತ್ತದೆ, ಅಷ್ಟಕ್ಕೂ ಈ ಕಾಯ್ದೆಯನ್ನೇ ಸರಿಯಾಗಿ ಅನುಷ್ಟಾನಗೊಳಿಸಲಾಗಿಲ್ಲ ಎಂದು ಗೊಗೊಯಿ ಕಿಡಿಕಾರಿದ್ದಾರೆ.
ತರಬೇತಿ ಹೊಂದಿದ ಸೂಕ್ಷ್ಮ ಸಂವೇದಿಯ ವಕೀಲರನ್ನು ಇಂತಹ ಪ್ರಕರಣಗಳಲ್ಲಿ ನೇಮಿಸಬೇಕು ಮತ್ತು ಪೋಕ್ಸೊ ಪ್ರಕರಣದಲ್ಲಿ ಮಾನಸಿಕ ಬೆಂಬಲ ನೀಡಲು ವ್ಯಕ್ತಿಯನ್ನು ನೇಮಿಸಬೇಕು ಎಂದು ಪೀಠ ತಿಳಿಸಿದೆ.





