ಮಲೇಷ್ಯಾ: ಪ್ರಶಸ್ತಿ ಗೆದ್ದ ಭಾರತ ಬೇಸ್‌ಬಾಲ್ ತಂಡದಲ್ಲಿ ಹೆಬ್ರಿ ಪಡುಕಡೂರಿನ ಆಕಾಶ್ ಹೆಗ್ಡೆ

ಹೆಬ್ರಿ, ಜು.25: ಮಲೇಷ್ಯಾದ ಉಪಿಎಂ ವಿಶ್ವವಿದ್ಯಾಲಯದ ಕ್ರೀಡಾಂಗಣ ದಲ್ಲಿ ಜು.17ರಿಂದ 21ರವರೆಗೆ ನಡೆದ ಅಂತಾರಾಷ್ಟ್ರೀಯ ಬೇಸ್‌ಬಾಸ್ ಚಾಂಪಿಯನ್‌ಶೀಪ್ ಮಲೇಷಿಯಾ-2019ರಲ್ಲಿ ಹೊಸದಿಲ್ಲಿಯ ಬೇಸ್‌ಬಾಲ್ ಸಾಪ್ಟ್‌ಬಾಲ್ ಅಕಾಡೆಮಿ (ಐಬಿಎಸ್‌ಎ) ತಂಡ ಜಯಗಳಿಸಿದೆ.
ಕಳೆದ ರವಿವಾರ ಭಾರತ ಮತ್ತು ಜಪಾನ್ ನಡುವೆ ಫ್ಯೆನಲ್ ಪಂದ್ಯ ನಡೆದಿದ್ದು, ಈ ಪಂದ್ಯವನ್ನು ಭಾರತ 14-10 ಅಂಕ ಅಂತರದಿಂದ ಜಯಿಸಿ ಅಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಇರ್ಬಿ ಜೋಸೆಫ್ ಮತ್ತು ದಿಲ್ಲಿಯ ಅನೂಪ್ ಕೋಚ್ ಆಗಿದ್ದ ಈ ತಂಡಕ್ಕೆ ಹೊಸದಿಲ್ಲಿಯ ಸಹೀಬ್ ನಾಯಕರಾಗಿ ಮುನ್ನಡೆಸಿದ್ದರು. ಈ ತಂಡದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪಡುಕುಡೂರಿನ ಆಕಾಶ್ ಹೆಗ್ಡೆಯೂ ಒಬ್ಬ ಆಟಗಾರರಾಗಿದ್ದರು.
ವಿಜಯಿ ತಂಡದಲ್ಲಿ ಹರ್ಯಾಣದ ಶಬ್ಬೀ, ರಾಜು, ಮಹಾರಾಷ್ಟ್ರದ ಸೊಮೇಶ್, ಕರ್ನಾಟಕದ ಆಕಾಶ್, ಅಜಯ್, ನಿರಂಜನ್, ಹರ್ಷ, ವಿಕ್ರಮ್, ಸುರೀನ್ ಮತ್ತು ಗಿರೀಶ್ ಸದಸ್ಯರಾಗಿದ್ದರು.
ಖುಷಿಯಾಗಿದೆ: ಪರಿಶ್ರಮ ಪಟ್ಟು ತರಬೇತಿ ಪಡೆದು ಅಂತಾರಾಷ್ಟ್ರೀಯ ಪಂದ್ಯಾಟದಲ್ಲಿ ಆಟವಾಡುವ ಅವಕಾಶದ ಜೊತೆಗೆ ಆಟದಲ್ಲಿ ಜಯಶಾಲಿಯಾಗಿದ್ದೇವೆ. ಭಾರತದ ಪರವಾಗಿ ವಿಜಯಮಾಲೆ ಧರಿಸಿಕೊಳ್ಳುವ ಆ ಕ್ಷಣ ಅತ್ಯಂತ ಖುಷಿ ನೀಡಿದೆ. ಕ್ರೀಡಾ ಕ್ಷೇತ್ರದ ನನ್ನ ಸಾಧನೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಆಕಾಶ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.








