ಮಹಿಳೆಯರ, ಮಕ್ಕಳ ರಕ್ಷಣೆಗೆ ಸುಗ್ರಾಮ ಒತ್ತಾಯ

ಮುಡಿಪು, ಜು.25: ಬಂಟ್ವಾಳ ತಾಲೂಕಿನ ಸುಗ್ರಾಮ-ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಸಭೆಯು ಮುಡಿಪು ನವಚೇತನ ಜೀವನ ಶಿಕ್ಷಣ ತರಬೇತಿ ಕೇಂದ್ರದಲ್ಲಿ ನಡೆಯಿತು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತಿರುವ ಬಗ್ಗೆ ಚರ್ಚಿಸಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಗ್ರಾಮ ಮಟ್ಟದ ಕೆಡಿಪಿ ಸಭೆ, ಸ್ಥಾಯಿ ಸಮಿತಿ ಸಭೆಗಳು ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಜಲ ಮರುಪೂರಣ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಇಂಗುಗುಂಡಿ, ಪೌಷ್ಟಿಕ ತೋಟ ನಿರ್ಮಾಣ, ಮಹಿಳಾ ದೌರ್ಜನ್ಯ ತಡೆಗಟ್ಟುವಲ್ಲಿ ಸುಗ್ರಾಮ ಸಂಘದ ಪಾತ್ರದ ಕುರಿತು ಸಂವಾದ ನಡೆಸಿದರು.
ಸುಗ್ರಾಮ ಕಾರ್ಯದರ್ಶಿ ಸುಮನಾ ಸ್ವಾಗತಿಸಿದರು. ಕೊಳ್ನಾಡು ಗ್ರಾಪಂ ಉಪಾಧ್ಯಕ್ಷೆ ಯಮುನಾ ವರದಿ ವಾಚಿಸಿದರು. ಸುಗ್ರಾಮ ಸಂಘದ ನಿರ್ದೇಶಕಿ ರೇವತಿ ಪೆರುವಾಯಿ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಚೇತನ್, ಸಂಯೋಜಕಿ ಕಾವೇರಿ ಸಹಕರಿಸಿದರು.







