ಉಪ ಲೋಕಾಯುಕ್ತರ ನೇಮಕ ಪ್ರಕರಣ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಜು.25: ಹದಿನೇಳು ತಿಂಗಳುಗಳಿಂದ ಖಾಲಿ ಇರುವ ಉಪ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ವಕೀಲರೂ ಆಗಿರುವ ಎಸ್.ಉಮಾಪತಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರರೂ ಆಗಿರುವ ವಕೀಲ ಎಸ್.ಉಮಾಪತಿ ಅವರು ವಾದಿಸಿ, ಕರ್ನಾಟಕ ಲೋಕಾಯುಕ್ತ ಕಾಯಿದೆ, ಸೆಕ್ಷನ್-8ರ ಅಡಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ನಾಗರಿಕರು ದೂರು ದಾಖಲಿಸಿದರೆ ಲೋಕಾಯುಕ್ತರು-1 ಹಾಗೂ ಉಪ ಲೋಕಾಯುಕ್ತ-2 ಅವರು ದೂರಿನ ಅನ್ವಯ ತನಿಖೆ ನಡೆಸಬಹುದು. ಆದರೆ, ರಾಜ್ಯದಲ್ಲಿ ಹದಿನೇಳು ತಿಂಗಳುಗಳಿಂದ ಉಪ ಲೋಕಾಯುಕ್ತರನ್ನೆ ನೇಮಕ ಮಾಡಿಲ್ಲ. ಇದರಿಂದ, ಸಾವಿರಾರು ದೂರುಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ಆದೇಶಿಸಿತು.





