ರೊಹಿಂಗ್ಯಾ ವಾಪಸಾತಿಗೆ ಮ್ಯಾನ್ಮಾರ್ ಸಿದ್ಧತೆಯನ್ನೇ ಮಾಡಿಲ್ಲ
ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್

ಯಾಂಗನ್, ಜು. 25: ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಪಡೆಯಲು ಸಿದ್ಧ ಎಂದು ಮ್ಯಾನ್ಮಾರ್ ಹೇಳುತ್ತಿದ್ದರೂ, ವಾಪಸಾತಿಗೆ ಅದು ಯಾವುದೇ ಸಿದ್ಧತೆಯನ್ನು ಮಾಡಿಲ್ಲ ಎಂದು ಆಸ್ಟ್ರೇಲಿಯದ ಸಂಘಟನೆ ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ (ಎಎಸ್‌ಪಿಐ) ಹೇಳಿದೆ.
2017ರಲ್ಲಿ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಪರಾರಿಯಾಗಿರುವುದನ್ನು ಸ್ಮರಿಸಬಹುದಾಗಿದೆ.
ಆ ಹಿಂಸಾಚಾರದ ಅವಧಿಯಲ್ಲಿ ಸುಮಾರು 400 ರೊಹಿಂಗ್ಯಾ ಗ್ರಾಮಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಲಾಗಿತ್ತು.
ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದಾಗಿ ಮ್ಯಾನ್ಮಾರ್ ಅಧಿಕಾರಿಗಳು ಭರವಸೆ ನೀಡಿರುವರಾದರೂ, ರೊಹಿಂಗ್ಯಾ ಗ್ರಾಮಗಳಲ್ಲಿ ಯಾವುದೇ ರೀತಿಯ ಪುನರ್ರಚನೆ ನಡೆಯದಿರುವುದು ಉಪಗ್ರಹ ಚಿತ್ರಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಎಎಸ್‌ಪಿಐ ತಿಳಿಸಿದೆ.





