ಬೀದಿ ವ್ಯಾಪಾರಿಗಳ ಕಾಯ್ದೆ ಜಾರಿಯಾಗದಿದ್ದರೆ ಬಿಬಿಎಂಪಿ ವಿರುದ್ಧ ದೂರು ದಾಖಲಿಸಬಹುದು: ಹೈಕೋರ್ಟ್

ಬೆಂಗಳೂರು, ಜು.25: ಬೀದಿ ಬದಿಯ ವ್ಯಾಪಾರಿಗಳ ಹಿತಕಾಯುವ ಉದ್ದೇಶದಿಂದ ಜಾರಿಗೆ ತಂದಿರುವ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ ಕಾಯ್ದೆ-2014 ಅನ್ನು ಜಾರಿಗೆ ತರದಿದ್ದರೆ ಬಿಬಿಎಂಪಿ ವಿರುದ್ಧ ದೂರು ದಾಖಲಿಸಬಹುದೆಂದು ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಕ್ಲಿಫ್ಟನ್ ರೋಜಾರಿಯೋ ಅವರು ವಾದಿಸಿ, ಕೇಂದ್ರ ಸರಕಾರ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ ಕಾಯ್ದೆ-2014 ಅನ್ನು ಜಾರಿಗೆ ತಂದು ನಾಲ್ಕು ವರ್ಷಗಳು ಕಳೆದರೂ ರಾಜ್ಯದಲ್ಲಿ ಅನುಷ್ಠಾನಗೊಂಡಿಲ್ಲ. ಇದರಿಂದ, ಬೀದಿ ಬದಿ ವ್ಯಾಪಾರಿಗಳು ಅಭದ್ರತೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಈ ಕಾಯ್ದೆಯನ್ನು ಅನುಷ್ಠಾನಗೊಳಿಸಿದರೆ ಬೀದಿ ವ್ಯಾಪಾರಿಗಳಲ್ಲಿ ಸುರಕ್ಷತೆ ಮೂಡಲಿದೆ. ಅಧಿಕಾರಿಗಳು, ಪೊಲೀಸರ ಕಿರುಕುಳ ತಪ್ಪಿ ಮಾಮೂಲಿ ವಸೂಲಿ ನಿಲ್ಲಲಿದೆ. ನ್ಯಾಯಯುತವಾಗಿ ವಹಿವಾಟು ನಡೆಸಲು ಅವಕಾಶ. ವ್ಯಾಜ್ಯ ಇತ್ಯರ್ಥ ಸಮಿತಿಗ ರಚನೆಯಾಗಲಿದೆ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಮಾರುಕಟ್ಟೆಯನ್ನು ವ್ಯಾಪಾರ ವಲಯ ಎಂದು ಘೋಷಿಸಬೇಕು. ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಬೇಕು. ಆದರೆ, ಇಲ್ಲಿಯವರೆಗೆ ಆ ಯಾವುದೇ ಕೆಲಸವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆ.22ಕ್ಕೆ ಮುಂದೂಡಿತು.







