ರಶ್ಯ ಹಸ್ತಕ್ಷೇಪ ಪ್ರಕರಣದಲ್ಲಿ ಟ್ರಂಪ್‌ಗೆ ದೋಷಮುಕ್ತಿ ನೀಡಿಲ್ಲ: ವಿಶೇಷ ವಕೀಲ ರಾಬರ್ಟ್ ಮುಲ್ಲರ್

ವಾಶಿಂಗ್ಟನ್, ಜು. 25: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ನಡೆದ ಫೆಡರಲ್ ತನಿಖೆಯಲ್ಲಿ ತನ್ನನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೇಳಿಕೆಯನ್ನು ಆ ತನಿಖೆಯನ್ನು ನಡೆಸಿರುವ ವಿಶೇಷ ವಕೀಲ ರಾಬರ್ಟ್ ಮುಲ್ಲರ್ ಬುಧವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
“ನನ್ನ ತನಿಖೆಗೆ ಅಡ್ಡಿ ಪಡಿಸಿದ ಆರೋಪದಿಂದ ಅಧ್ಯಕ್ಷರನ್ನು ನಾನು ದೋಷಮುಕ್ತಗೊಳಿಸಿಲ್ಲ” ಎಂದು ಸಂಸತ್ ಕಾಂಗ್ರೆಸ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅದೇ ವೇಳೆ, ತಾನು ನಡೆಸಿದ ತನಿಖೆಯು ‘ದ್ವೇಷ ಸಾಧನೆ’ಯಾಗಿದೆ ಹಾಗೂ ‘ನಕಲಿ’ಯಾಗಿದೆ ಎಂಬ ಟ್ರಂಪ್‌ರ ಆರೋಪಗಳನ್ನು ಅವರು ತಿರಸ್ಕರಿಸಿದರು.
ರಶ್ಯದಿಂದ ಕದಿಯಲ್ಪಟ್ಟ ಡೆಮಾಕ್ರಟಿಕ್ ನಾಯಕರ ಇಮೇಲ್‌ಗಳನ್ನು ಪ್ರಕಟಿಸಿರುವುದಕ್ಕಾಗಿ ಟ್ರಂಪ್ ವಿಕಿಲೀಕ್ಸ್‌ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದನ್ನೂ ಮುಲ್ಲರ್ ಖಂಡಿಸಿದರು.
ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪವು ಪ್ರಜಾಪ್ರಭುತ್ವಕ್ಕೆ ಎದುರಾದ ಅತಿ ದೊಡ್ಡ ಸವಾಲಾಗಿದೆ ಎಂಬುದಾಗಿಯೂ ಅವರು ಹೇಳಿದರು.





