ಮೂಲ ನಿವಾಸಿಗಳಿಗೆ ಕುಕ್ಕೆ ದೇವಳದ ಹಕ್ಕು ಕೊಡಿ: ಭಾಸ್ಕರ ಬೆಂಡೋಡಿ
ಪುತ್ತೂರು : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮೂಲ ನಿವಾಸಿಗಳಿಗೆ ಪಾರಂಪರಿಕ ಹಕ್ಕು ನೀಡಬೇಕು. ಕುಕ್ಕೆ ಮೂಲ ದೇವಾಲಯವಾದ ಆದಿಸುಬ್ರಾಯ ದೇವಾಲಯವನ್ನು ಹಕ್ಕನ್ನು ಅಲ್ಲಿನ ಮೂಲ ನಿವಾಸಿಗಳಿಗೆ ಬಿಟ್ಟುಕೊಡಬೇಕು ಎಂದು ಬಿರ್ಸಾ ಮುಂಡಾ ಡ್ರೈಬಲ್ಸ್ ಕಮ್ಯುನಿಟಿ ಡೆವಲಪ್‍ಮೆಂಟ್ ಟ್ರಸ್ಟ್ ರಾಜ್ಯಾಧ್ಯಕ್ಷ ಬಿ.ಕೆ. ಭಾಸ್ಕರ ಬೆಂಡೋಡಿ ಆಗ್ರಹಿಸಿದ್ದಾರೆ.
ಅವರು ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಳೆಯ ದಾಖಲೆಯಾದ ಅಡೆಂಗಲ್‍ನಲ್ಲಿ ಕುಕ್ಕೇಪುರ ಸುಬ್ರಾಯ ದೇವಳ ಎಂದಿರುವುದನ್ನು ಕುಕ್ಕೇ ಸುಬ್ರಹ್ಮಣ್ಯ ಎಂದು ಬದಲಾಯಿಸಿರುವುದು ಯಾರೆಂಬುದು ನಿಗೂಢವಾಗಿದೆ. 1904ರ ಮದ್ರಾಸ್ ಸರ್ಕಾರದ ಸರ್ವೆ ಸಟ್ಲಾಮೆಂಟ್ ದಾಖಲೆಯಲ್ಲಿ ಸುಬ್ರಾಯ ದೇವರು ಎಂದೇ ದಾಖಲಾಗಿದೆ. 1954ರಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶ ಪತ್ರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರು ಉಲ್ಲೇಖ ಮಾಡಲಾಗಿದೆ .ಆದರೆ ಇದಕ್ಕೆ ಸಂಬಂಧಿಸಿದ ಮಾಹಿತಿ ಹಕ್ಕಿನಡಿ ವಿಚಾರಿಸಿದಾಗ ಯಾವುದೇ ದಾಖಲೆಗಳು ಮುಜರಾಯಿ ಇಲಾಖೆಯಲ್ಲಾಗಲೀ, ದೇವಳದ ಆಡಳಿತ ವಿಭಾಗದಲ್ಲಾಗಲೀ ಕಂಡುಬರುತ್ತಿಲ್ಲ ಎಂದರು.
ಆದಿಸುಬ್ರಾಯ ದೇವಾಲಯ ಮೂಲತಃ ಅಲ್ಲಿನ ಮೂಲನಿವಾಸಿಗಳ ಪಾರಂಪರಿಕ ಹಕ್ಕಿನ ಜಾಗ. ಆದರೆ ಮೂಲನಿವಾಸಿಗಳಿಗೆ ಆ ಹಕ್ಕು ನೀಡದೆ, ಆಡಳಿತ ವ್ಯವಸ್ಥೆಯಲ್ಲಿ ಅವಕಾಶ ಕೊಡದೆ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದ ಅವರು ಕುಕ್ಕೇ ಸುಬ್ರಹ್ಮಣ್ಯ ದೇವಾಲಯದ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ದಾಖಲೆ ಇಲ್ಲ ಎಂಬ ಉತ್ತರ ಧಾರ್ಮಿಕ ದತ್ತಿ ಇಲಾಖೆಯಿಂದ ಸಿಗುತ್ತಿದೆ. ಕುಕ್ಕೇಪುರ ಎಂಬುವುದಕ್ಕೆ ದಾಖಲೆ ಇದೆ. ಕುಕ್ಕೇ ಸುಬ್ರಹ್ಮಣ್ಯ ಎಂಬುವುದಕ್ಕೆ ಯಾವುದೇ ದಾಖಲೆ ಇಲ್ಲ ಎಂದ ಅವರು ಕ್ಷೇತ್ರದ ಸಂಪ್ರದಾಯಗಳ ಮೇಲೆ ಮುಜರಾಯಿ ಇಲಾಖೆ ಕಾನೂನಿನ ಮೂಲಕ ಬದಲಾವಣೆ ಮಾಡಿರುವುದು ಪಾರಂಪರಿಕ ಭಕ್ತರ ಧಾರ್ಮಿಕ ಹಕ್ಕುಗಳ ಮೇಲೆ ನಡೆಸಿದ ದೌರ್ಜನ್ಯವಾಗಿದೆ ಎಂದು ಆರೋಪಿಸಿದರು.
ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ದೇವಾಲಯಗಳಲ್ಲಿ ಸರ್ಪಸಂಸ್ಕಾರಕ್ಕೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಶುಲ್ಕ ವಿಧಿಸಲಾಗುತ್ತಿದೆ. ಕುಕ್ಕೇ ಸುಬ್ರಹ್ಮಣ್ಯದಲ್ಲಿ ರೂ.3200, ಕುಡುಪು ಅನಂತ ಪದ್ಮನಾಭ ದೇವಾಲಯದಲ್ಲಿ ರೂ.8500 ಶುಲ್ಯ ವಿಧಿಸಲಾಗುತ್ತಿದೆ. ಘಾಟಿ ಸುಬ್ರಹ್ಮಣ್ಯ ದೇವಳದಲ್ಲಿ ರೂ.17 ಸಾವಿರ ಎಂದು ಸೇವಾ ಪಟ್ಟಿಯಲ್ಲಿದೆ. ಎಲ್ಲಾ ದೇವಾಲಗಳಲ್ಲಿಯೂ ಸರ್ಪಸಂಸ್ಕಾರದ ಪೂಜಾ ವಿಧಾನ ಒಂದೇ ರೀತಿಯಾಗಿದ್ದರೂ ಶುಲ್ಕದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಸರ್ವ ಸಂಸ್ಕಾರದಲ್ಲಿ ಭಕ್ತರನ್ನು ವಂಚಿಸುವ ಮೂಲಕ ಧಾರ್ಮಿಕ ಶೋಷಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಕುಡುಪು ದೇವಳದಲ್ಲಿ 4 ದಿನಗಳ ಸರ್ಪಸಂಸ್ಕಾರ ಸೇವೆ ನಡೆಸಲಾಗುತ್ತಿದೆ.ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಈ ಹಿಂದೆ 4 ದಿನಗಳ ಕಾಲ ನಡೆಸುತ್ತಿದ್ದ ಸರ್ಪ ಸಂಸ್ಕಾರ ಸೇವೆಯನ್ನು ಪ್ರಸ್ತುತ 2 ದಿನಗಳಲ್ಲಿ ಮುಗಿಸಲಾಗುತ್ತಿದೆ. ಧಾರ್ಮಿಕ ವಿಧಿವಿಧಾನಗಳ ಆಚರಣೆಯಲ್ಲೂ ಮುಜರಾಯಿ ದೇವಾಲಯಗಳಲ್ಲಿ ಏಕರೂಪದ ನಿಯಮ ಕಂಡುಬರುತ್ತಿಲ್ಲ ಎಂದ ಅವರು ದೋಷಪೂರಿತ ಈ ವ್ಯವಸ್ಥೆಯನ್ನು ಬದಲಾಯಿಸಬೇಕು, ಒಂದೇ ರೀತಿಯ ನಿಯಮ ಜಾರಿಗೊಳಿಸುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.







