ಅಂಬ್ಲಮೊಗರು ನಲ್ಲಿ ತಾಲೂಕು ಮಟ್ಟದ ಚೆಸ್ ಪಂದ್ಯಾಟ

ಉಳ್ಳಾಲ: ಅಂಬ್ಲಮೊಗರು ನಂತಹ ಗ್ರಾಮಾಂತರ ಭಾಗದಲ್ಲಿ ಪ್ರಥಮ ಬಾರಿ ಚೆಸ್ ಪಂದ್ಯಾಟ ನಡೆಯುತ್ತಿರುವುದು ಶ್ಲಾಘನೀಯವಾಗಿದ್ದು, ಇಂತಹ ಪಂದ್ಯಾಟಗಳು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚೆಚ್ಚು ನಡೆದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಅಭಿಪ್ರಾಯಪಟ್ಟರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ವಲಯ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಅಂಬ್ಲಮೊಗರು ಇವರ ಸಂಯುಕ್ತ ಆಶ್ರಯದಲ್ಲಿ ,ಅಂಬ್ಲಮೊಗರು ಶಾಲೆಯಲ್ಲಿ ಗುರುವಾರ ನಡೆದ 14/17 ವರ್ಷದ ವಯೋಮಿತಿಯೊಳಗಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಚೆಸ್ ಪಂದ್ಯಾಟ 2019-20 ನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, ಚೆಸ್ ಆಟ ಬದುಕಿನ ಪಾಠಗಳನ್ನು ಕಲಿಸುತ್ತದೆ. ಶಕ್ತಿ ಮತ್ತು ಯುಕ್ತಿಯ ಆಟ ಚೆಸ್, ಮಾನಸಿಕ ಚೈತನ್ಯಗಳನ್ನು ಬೆಳೆಸುವಲ್ಲಿ ಸಹಕಾರಿ. ಈ ಮೂಲಕ ಮಕ್ಕಳ ಮಾನಸಿಕತೆಯಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ. ಸದ್ಯ ಅಂತ್ಯಗೊಳ್ಳುತ್ತಿದ್ದ ಸರಕಾರಿ ಶಾಲೆಗಳಲ್ಲಿ ಉತ್ಸಾಹಗಳು ಕಂಡುಬರುತ್ತಿದೆ. ಆಂಗ್ಲ ಮಾಧ್ಯಮ ಶಿಕ್ಷಣದ ಮೂಲಕ ಪುನಶ್ಚೇತನ ನಿರ್ಮಾಣವಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬ್ಲಮೊಗರು ಗ್ರಾ.ಪಂ ಅಧ್ಯಕ್ಷ ರಫೀಕ್ ಅಂಬ್ಲಮೊಗರು ವಹಿಸಿದ್ದರು. ತಾ. ಪಂ ಸದಸ್ಯೆ ಶಶಿಪ್ರಭಾ ಡಿ ಶೆಟ್ಟಿ, ಮಂಗಳೂರು ದಕ್ಷಿ ಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಆರ್ ಲೋಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ವಿಷ್ಣು ಹೆಬ್ಬಾರ್, ಅಂಬ್ಲಮೊಗರು ಗ್ರಾ.ಪಂ ಸದಸ್ಯರುಗಳಾದ ದಯಾನಂದ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಮನೋಹರ್, ರಾಜೀವಿ, ಮಂಗಳುರು ದಕ್ಷಿಣ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ರಾವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗ್ರೇಡ್ ೧ ಅಧ್ಯಕ್ಷೆ ಲಿಲ್ಲಿ ಪಾಯಸ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ, ದೈಹಿಕ ಶಿಕ್ಷಕರ ಶಿಕ್ಷಣ ಸಂಘದ ಗ್ರೇಡ್ -೨ ಅಧ್ಯಕ್ಷ ಮೋಹನ್ ಶಿರ್ಲಾಲು, ಮುನ್ನೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರೆಹನಾ, ತಾ.ಪಂ ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ, ಗ್ರಾ.ಪಂ ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ ಅಂಬ್ಲಮೊಗರು, ವಿಠಲ ಶೆಟ್ಟಿ ಬಸ್ತಿಕಟ್ಟೆ, ಎಸ್ ಡಿ ಎಂಸಿ ಅಧ್ಯಕ್ಷ ಅಬುಸಾಲಿ, ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಜಗದೀಶ ಶೆಟ್ಟಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಲೀಲಾವತಿ ವಂದಿಸಿದರು.ಶಿಕ್ಷಕಿಯರಾದ ಗೀತಾ .ಕೆ ಮತ್ತು ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯಲ್ಲಿ 230 ವಿದ್ಯಾರ್ಥಿಗಳು ಭಾಗವಹಿಸಿದ್ದರು







