58 ಹಳೆಯ ಕಾಯ್ದೆ ರದ್ದುಪಡಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ

ಹೊಸದಿಲ್ಲಿ, ಜು. 25: ಜನರಿಗೆ ಅನನುಕೂಲತೆ ಹಾಗೂ ತೊಂದರೆ ಉಂಟು ಮಾಡುವ 58 ಹಳೆಯ ಕಾಯ್ದೆಗಳನ್ನು ರದ್ದುಪಡಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಲಾಯಿತು ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಮಸೂದೆಯ ಅಧ್ಯಯನಕ್ಕೆ ಜನಪ್ರತಿನಿಧಿಗಳಿಗೆ ಸಾಕಷ್ಟು ಸಮಯಾವಕಾಶ ನೀಡದ ಸರಕಾರ, ಈ ಮಸೂದೆಯನ್ನು ತರಾತುರಿಯಿಂದ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದ್ದಾರೆ. 1,458 ಹಳೆಯ ಹಾಗೂ ಪುರಾತನ ಕಾಯ್ದೆಯನ್ನು ನರೇಂದ್ರ ಮೋದಿ ಸರಕಾರ ಈಗಾಗಲೇ ರದ್ದುಗೊಳಿಸಿದೆ. ಅಲ್ಲದೆ, ಇತರ 28 ಕಾಯ್ದೆಗಳನ್ನು ರದ್ದುಗೊಳಿಸಲು ಕ್ರಮ ಕೈಗೊಂಡಿದೆ ಎಂದು ಪ್ರಸಾದ್ ತಿಳಿಸಿದರು. ಮಸೂದೆಯ ಅಧ್ಯಯನಕ್ಕೆ ಸಾಕಷ್ಟು ಸಮಯಾವಕಾಶ ನೀಡಿಲ್ಲ ಎಂಬ ಪ್ರತಿಪಕ್ಷದ ಸದಸ್ಯರ ಆರೋಪವನ್ನು ಸರಕಾರ ತಿರಸ್ಕರಿಸಿದೆ. ಎರಡು ದಿನಗಳಿಗಿಂತ ಮುನ್ನವೇ ನೋಟಿಸು ನೀಡಲಾಗಿತ್ತು. ಈ ಮಸೂದೆ ಉತ್ತಮ ಕ್ರಮ ಎಂಬ ಒಮ್ಮತದ ಅಭಿಪ್ರಾಯ ಈಗಾಗಲೇ ಬಂದಿತ್ತು ಎಂದು ಪ್ರಸಾದ್ ಹೇಳಿದ್ದಾರೆ.
ಎಲ್ಲ ಪ್ರಮುಖ ಪಕ್ಷಗಳ ಸದಸ್ಯರು ಇರುವ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಈ ಮಸೂದೆ ವಿಸ್ತೃತವಾಗಿ ಚರ್ಚಿತವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘಾವಲ್ ಹೇಳಿದರು. ಮಸೂದೆ ಮಂಡಿಸುವ ಮೊದಲು ಅಧ್ಯಯನ ನಡೆಸಲು ಸದಸ್ಯರಿಗೆ ಎರಡು ದಿನಗಳ ಕಾಲಾವಕಾಶ ನೀಬೇಕು. ಆದರೆ, ಬ್ರಿಟೀಶ್ ಯುಗದ ಕಾನೂನನ್ನು ರದ್ದುಗೊಳಿಸಬೇಕು ಹಾಗೂ ಅದರ ಸ್ಥಾನದಲ್ಲಿ ಹೊಸ ಕಾನೂನು ಜಾರಿಗೆ ತರಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.





