ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡನೆ: ಸಮರ್ಥಿಸಿಕೊಂಡ ಕೇಂದ್ರ ಸರಕಾರ

ಹೊಸದಿಲ್ಲಿ, ಜು. 25: ತ್ರಿವಳಿ ತಲಾಕ್ ಅನ್ನು ಕಾನೂನು ಬಾಹಿರವಾಗಿಸುವ ಹಾಗೂ ಪತಿಗೆ ಮೂರು ವರ್ಷದ ವರೆಗೆ ಶಿಕ್ಷೆ ನೀಡುವ ವಿವಾದಾತ್ಮಕ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ಲೋಕಸಭೆಯ ಪರಿಗಣನೆಗೆ ಮಸೂದೆ ಮಂಡಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಕ್ ಹಾಗೂ ತಲಾಕ್ ಎ ಬಿದ್ದತ್ ಮೂಲಕ ಮಹಿಳೆಯರಿಗೆ ವಿಚ್ಛೇದನ ನೀಡುವ ಆಚರಣೆಯನ್ನು ಸುಪ್ರೀಂ ಕೋರ್ಟ್ 2017 ಆಗಸ್ಟ್‌ನಲ್ಲಿ ರದ್ದುಪಡಿಸಿದ ಹೊರತಾಗಿಯೂ ಲಿಂಗ ಸಮಾನತೆ ಹಾಗೂ ನ್ಯಾಯಕ್ಕಾಗಿ ಈ ಮಸೂದೆ ಅಗತ್ಯವಾಗಿತ್ತು ಎಂದರು.
2017 ಜನವರಿಯಿಂದ 574ಕ್ಕೂ ಅಧಿಕ ತ್ರಿವಳಿ ತಲಾಕ್ ಪ್ರಕರಣಗಳು ಹಾಗೂ ಸುಪ್ರೀಂ ಕೋರ್ಟ್ ಆದೇಶದ ಬಳಿಕ 300ಕ್ಕೂ ಅಧಿಕ ಪ್ರಕರಣಗಳನ್ನು ಮಾದ್ಯಮಗಳು ವರದಿ ಮಾಡಿವೆ ಎಂದು ಅವರು ತಿಳಿಸಿದರು. “ಈ ಪರಿಸ್ಥಿತಿಯಲ್ಲಿ, ನಾವು ಏನು ಮಾಡಬೇಕು ? ಮುಸ್ಲಿಂ ಮಹಿಳೆಯರ ಮೇಲಿನ ಶೋಷಣೆ ಮುಂದುವರಿಸಲು ಅವಕಾಶ ನೀಡಬೇಕೇ ?” ಎಂದು ಅವರು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಹಾಗೂ ಮಲೇಶ್ಯಾ ಸಹಿತ ಜಗತ್ತಿನ 30 ಮುಸ್ಲಿಂ ದೇಶಗಳು ತ್ರಿವಳಿ ತಲಾಕ್ ಅನ್ನು ನಿಷೇಧಿಸಿವೆ. ಜಾತ್ಯತೀತ ಭಾರತ ಯಾಕೆ ನಿಷೇಧ ಮಾಡಬಾರದು? ಎಂದು ಅವರು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ ಮೂರು ವಿಭಿನ್ನ ತೀರ್ಪು ನೀಡಿತು. ಒಂದು ತೀರ್ಪಿನಲ್ಲಿ ನ್ಯಾಯಾಲಯ, ತ್ರಿವಳಿ ತಲಾಕ್ ‘ಶರಿಯಾ’ದ ಒಂದು ಭಾಗ. ಈ ಸಂಪ್ರದಾಯವನ್ನು ನಿಲ್ಲಿಸಲು ಕಾನೂನು ರೂಪಿಸಬೇಕು ಎಂದು ಹೇಳಿತ್ತು ಎಂದರು. ಧರ್ಮ ಪರಿಗಣಿಸದೆ ಲಿಂಗ ನ್ಯಾಯ ನೀಡಬೇಕು ಎನ್ನುವುದು ನಮ್ಮ ಸಂವಿಧಾನದ ಮುಖ್ಯ ಸಿದ್ಧಾಂತ. ನಾವು ಮಹಿಳೆಯರಿಗೆ ಗೌರವ ಹಾಗೂ ನ್ಯಾಯ ಒದಗಿಸಲು ಬಯಸುತ್ತೇವೆ ಎಂದು ಅವರು ಹೇಳಿದರು. ಪ್ರಸ್ತಾಪಿತ ಮಸೂದೆಯನ್ನು ಧರ್ಮ ಹಾಗೂ ರಾಜಕೀಯದ ಸ್ಪಟಿಕದ ಮೂಲಕ ನೋಡಬೇಡಿ ಎಂದು ರವಿಶಂಕರ್ ಪ್ರಸಾದ್ ಸಂಸದರಲ್ಲಿ ಮನವಿ ಮಾಡಿದರು.







