ಪ್ರೆಸಿಡೆಂಟ್ಸ್ ಕಪ್: ಬಾಕ್ಸಿರ್ ಗೌರವ್ ಬಿಧುರಿ ಸೆಮಿ ಫೈನಲ್‌ಗೆ

ಹೊಸದಿಲ್ಲಿ, ಜು.25: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತರಾಗಿರುವ ಗೌರವ್ ಬಿಧುರಿ(56ಕೆಜಿ) ಫಿಲಿಪ್ಪೈನ್ಸ್‌ನಲ್ಲಿ ನಡೆದ ಪ್ರೆಸಿಡೆಂಟ್ಸ್ ಕಪ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಈ ಮೂಲಕ ಪದಕವನ್ನು ದೃಢಪಡಿಸಿದ್ದಾರೆ.
ಹ್ಯಾಂಬರ್ಗ್‌ನಲ್ಲಿ 2017ರ ವರ್ಲ್ಡ್‌ಇವೆಂಟ್‌ನಲ್ಲಿ ಭಾರತಕ್ಕೆ ಏಕೈಕ ಪದಕ ಗೆದ್ದುಕೊಟ್ಟಿರುವ ಬಿಧುರಿ ಕ್ವಾರ್ಟರ್ ಫೈನಲ್‌ನಲ್ಲಿ ಅಫ್ಘಾನಿಸ್ತಾನದ ವಾರಿಸ್ ಕರಿಮಿ ಅವರನ್ನು ಸೋಲಿಸಿ ಅಂತಿಮ-4ರ ಹಂತ ತಲುಪಿದ್ದಾರೆ.
ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಬಿಧುರಿ ಮುಂದಿನ ಸುತ್ತಿನಲ್ಲಿ ಸ್ಥಳೀಯ ಫೇವರಿಟ್ ಜುನ್‌ಮಿಲಾರ್ಡೊ ಒಗಾಯ್ರೆ ಅವರನ್ನು ಎದುರಿಸಲಿದ್ದಾರೆ. ಒಗಾಯ್ರೆ ಕೊರಿಯದ ಕಿಮ್ ಹಾಜಿನ್‌ರನ್ನು ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಮಣಿಸಿದ್ದರು.
ಐಕಾನ್ ಬಾಕ್ಸರ್ ಎಂಸಿ ಮೇರಿಕೋಮ್ ಈ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಮೇರಿಕೋಮ್ ಈಗಾಗಲೇ 51 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಇದಕ್ಕೂ ಮೊದಲು ಇಂಡಿಯಾ ಓಪನ್ ಚಾಂಪಿಯನ್ ಜಮುರಾ ಬೊರೊ(54ಕೆಜಿ)ಮಹಿಳೆಯರ ಇವೆಂಟ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ. ಮೋನಿಕಾ ಫೈನಲ್‌ಗೆ ಪ್ರವೇಶಿಸಿದ್ದಾರೆ.







