ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರ ಕುಮ್ಮಕ್ಕು: ವಿ.ಎಸ್.ಉಗ್ರಪ್ಪ ಗಂಭೀರ ಆರೋಪ
ಬೆಂಗಳೂರು, ಜು. 26: ‘ಕುದುರೆ ವ್ಯಾಪಾರಕ್ಕೆ ಕಡಿವಾಣ ಹಾಕಬೇಕಿದ್ದ ರಾಜ್ಯಪಾಲರೆ ಕುದುರೆ ವ್ಯಾಪಾರದ ಮೂಲಕ ಬಿಜೆಪಿ ಸರಕಾರ ರಚನೆಗೆ ಅವಕಾಶ ನೀಡಿದ್ದು ಸಂವಿಧಾನ ಬಾಹಿರ. ಇದು ಜನಾದೇಶಕ್ಕೆ ವಿರುದ್ಧ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಎಸಗುತ್ತಿರುವ ಅಪಚಾರ’ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರಕರಣ ಬಾಕಿ ಇದೆ. ಅದು ಇತ್ಯರ್ಥ ಆಗುವವರೆಗೂ ಅವರೆಲ್ಲಾ ಕಾಂಗ್ರೆಸ್-ಜೆಡಿಎಸ್ ಶಾಸಕರೇ. ಹೀಗಿರುವಾಗ 105 ಶಾಸಕರ ಸಂಖ್ಯಾಬಲದ ಬಿಜೆಪಿ, ಬಹುಮತಕ್ಕೆ ಅಗತ್ಯವಿರುವ 112 ಸಂಖ್ಯಾಬಲ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕುದುರೆ ವ್ಯಾಪಾರದಿಂದ ಮಾತ್ರವೇ ಸಂಖ್ಯಾಬಲ ಸಾಧ್ಯ. ವಾಮಮಾರ್ಗದಲ್ಲಿ ಮಾತ್ರವೆ ಬಿಜೆಪಿ ಸರಕಾರ ರಚನೆ ಸಾಧ್ಯ. ಜನಾದೇಶ ಧಿಕ್ಕರಿಸುವಂತ, ಪ್ರಜಾಪ್ರಭುತ್ವ ನಿರಾಕರಿಸುವಂತಹ ಕೆಲಸಗಳನ್ನು ಬಿಜೆಪಿ ಮಾಡುತ್ತಿದೆ. ಸದನದ ಸಾರ್ವಭೌಮತ್ವವನ್ನ ರಾಜ್ಯಪಾಲರು ಅರಿಯದೆ ಬಹುಮತ ಸಾಬೀತಿಗೆ ತರಾತುರಿಯಲ್ಲಿ ಮೈತ್ರಿ ನಿರ್ದೇಶನ ನೀಡಿದ್ದರು. ಇದೀಗ ಅದೇ ಕೆಲಸವನ್ನು ರಾಜ್ಯಪಾಲರು ಮಾಡುತ್ತಿಲ್ಲ. ಬಿಜೆಪಿಗೆ ಸಂಖ್ಯಾಬಲ ಇಲ್ಲದೆ ಇದ್ದರೂ ಸರಕಾರ ರಚನೆಗೆ ಅವಕಾಶ ನೀಡಿದ್ದಾರೆ. ಬಿಎಸ್ವೈ ಮೂರು ಬಾರಿಯೂ ವಾಮಮಾರ್ಗದಲ್ಲಿಯೇ ಮುಖ್ಯಮಂತ್ರಿಗಳಾಗಿದ್ದಾರೆ. ಈ ಬಾರಿಯೂ ಆಪರೇಷನ್ ಕಮಲ ಮೂಲಕ ಕುದುರೆ ವ್ಯಾಪಾರ ನಡೆಸಿ, ಶಾಸಕರನ್ನು ಖರೀದಿಸಿ ಪ್ರಮಾಣವಚನ ಸ್ವೀಕರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಅಶೋಕ್ ಪಟ್ಟಣ್, ಅಪ್ಪಾಜಿ ನಾಡಗೌಡ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅತೃಪ್ತರಿಗೆ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ನೀಡಲು ಮುಂದಾಗಿರುವುದು ಅಕ್ರಮ. ಶಾಸಕರ ರಾಜೀನಾಮೆ ಇತ್ಯರ್ಥವಾಗದೆ ಬಿಎಸ್ವೈ ಪ್ರಮಾಣ ವಚನ ರಾಜಕೀಯ ವ್ಯಭಿಚಾರ. ರಾಜ್ಯಪಾಲರು ಅಕ್ರಮಗಳಿಗೆ ಅವಕಾಶಕೊಟ್ಟಿರುವುದು ರಾಜಕೀಯ ಪಕ್ಷಗಳು ಮುಂದಿನ ಹೆಜ್ಜೆ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ’
-ಎಚ್.ಕೆ.ಪಾಟೀಲ್, ಮಾಜಿ ಸಚಿವ