ಗುಜರಾತ್: ಏಕತಾ ಪ್ರತಿಮೆಯ ಬಳಿ ಭೂಸ್ವಾಧೀನಕ್ಕೆ ಹೈಕೋರ್ಟ್ ತಡೆ
ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ರಾಜ್ಯ ಸರಕಾರಕ್ಕೆ ಸೂಚನೆ

ಅಹ್ಮದಾಬಾದ್,ಜು.26: ಮುಂದಿನ ಆದೇಶದವರೆಗೆ ನರ್ಮದಾ ಜಿಲ್ಲೆಯಲ್ಲಿನ ಏಕತಾ ಪ್ರತಿಮೆಯ ಬಳಿ ಪ್ರವಾಸೋದ್ಯಮ ಯೋಜನೆಗಳಿಗಾಗಿ ಭೂ ಸ್ವಾಧೀನ ವಿಷಯದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಗುಜರಾತ್ ಉಚ್ಚ ನ್ಯಾಯಾಲಯವು ಆದೇಶಿಸಿದೆ.
ಏಕತಾ ಪ್ರತಿಮೆ ಸಮೀಪದ ಕೇವಡಿಯಾ,ವಗಾಡಿಯಾ,ನವಗ್ರಾಮ,ಲಿಂಬ್ಡಿ,ಕೋಥಿ ಮತ್ತು ಗೋರಾ ಗ್ರಾಮಗಳಲ್ಲಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆಯೂ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಪರಿಸರ ವಿಜ್ಞಾನಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ ಪಾಂಡ್ಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಈ ನಿರ್ದೇಶಗಳನ್ನು ಹೊರಡಿಸಿತು. ಗುಜರಾತ್ ಸರಕಾರ ಮತ್ತು ಸರ್ದಾರ್ ಸರೋವರ ನರ್ಮದಾ ನಿಗಮ ಲಿ.ಗೆ ನೋಟಿಸ್‌ಗಳನ್ನು ನೀಡಿದ ಅದು,ವಿಚಾರಣೆಯನ್ನು ಆ.31ಕ್ಕೆ ಮುಂದೂಡಿದೆ.
ಗುಜರಾತ್ ಸರಕಾರ ಮತ್ತು ಸರ್ದಾರ್ ಸರೋವರ ನರ್ಮದಾ ನಿಗಮ ಲಿ.ಭೂ ಸ್ವಾಧೀನ ಕಾಯ್ದೆಯಡಿ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ನೆಪದಲ್ಲಿ ಸುಮಾರು 5,000 ಆದಿವಾಸಿಗಳನ್ನು ತೆರವುಗೊಳಿಸಲು ಮುಂದಾಗಿವೆ ಎಂದು ಪಾಂಡ್ಯ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
1960ರ ದಶಕದಲ್ಲಿ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿಯೇ ಸದ್ರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು ಎಂದು ಸರಕಾರವು ನ್ಯಾಯಾಲಯಕ್ಕೆ ತಿಳಿಸಿದರೆ, ಅಧಿಕಾರಿಗಳು ಈ ಭೂಮಿಯನ್ನು ಎಂದೂ ಬಳಸಿಕೊಳ್ಳಲಿಲ್ಲವಾದ್ದರಿಂದ ಅದರ ಒಡೆತನ ಗ್ರಾಮಸ್ಥರ ಬಳಿಯೇ ಇತ್ತು ಎಂದು ಹೇಳಿದ ಪಾಂಡ್ಯ, ಮೂಲ ಭೂ ಸ್ವಾಧೀನವು ಈಗ ಅಸ್ತಿತ್ವವನ್ನು ಕಳೆದುಕೊಂಡಿದೆ ಮತ್ತು ಕಳೆದ 58 ವರ್ಷಗಳಿಂದಲೂ ಭೂಮಿಯು ಆದಿವಾಸಿಗಳ ಬಳಿಯೇ ಇದೆ ಎಂದು ವಾದಿಸಿದರು.
ಮಧ್ಯಪ್ರದೇಶ,ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಜನರನ್ನು ನಿರ್ವಸಿತಗೊಳಿಸಿರುವ ಸರ್ದಾರ್ ಸರೋವರ ಅಣೆಕಟ್ಟಿಗೆ ಕೆಲವೇ ಕಿ.ಮೀ.ಅಂತರದಲ್ಲಿ 182 ಮೀ.ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ತಲೆಯೆತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಕತಾ ಪ್ರತಿಮೆಯನ್ನು ಅನಾವರಣಗೊಳಿಸುವ ಮೊದಲು ಪ್ರತಿಭಟನೆಯ ಬೆದರಿಕೆಯನ್ನೊಡ್ಡಿದ್ದ ಹಲವಾರು ರೈತರು ಮತ್ತು ಆದಿವಾಸಿಗಳನ್ನು ಪೊಲೀಸರು ಬಂಧಿಸಿದ್ದರು.







