ಅನುಭವಗಳಿಂದ ಸುಖಿ ಸಮಾಜದ ನಿರ್ಮಾಣ: ವಿಶ್ವನಾಥ ಕರಬ
ಉಡುಪಿ, ಜು.26: ಅನುಭವಗಳು ಭಾವದಲ್ಲಿ ಕಟ್ಟಿಕೊಂಡಾಗ ಅನುಭಾವ ವಾಗುತ್ತದೆ. ಅನುಭವ ಎಂದಿಗೂ ಮರೆಯಲು ಸಾದ್ಯವಿಲ್ಲ. ಅನುಭವಗಳು ಎಲ್ಲಿ ಹೆಚ್ಚಾಗುತ್ತದೆಯೋ ಅಲ್ಲಿ ಅನುಭಾವಗಳು ವಿಸ್ತೃತಗೊಳ್ಳುತ್ತದೆ. ಸುಖಿ ಸಮಾಜದ ನಿರ್ಮಾಣವಾಗುತ್ತದೆ. ಅನುಭವ ಹಾಗೂ ಅನುಭಾವಗಳಿಂದ ಕೂಡಿದ ಶರಣರ ನೀತಿಯಿಂದ ಬದುಕು ಸುಂದರವಾಗುತ್ತದೆ ಎಂದು ಪ್ರಾಂಶು ಪಾಲ ವಿಶ್ವನಾಥ ಕರಬ ಹೇಳಿದ್ದಾರೆ.
ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಶ್ರೀ ಸಾಣೆಹಳ್ಳಿ ಮಠದ ಸಹಮತ ವೇದಿಕೆಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮತ್ತೆ ಕಲ್ಯಾಣ ಎಂಬ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.
ವಚನ ಎಂಬ ಪದವೇ ಅರ್ಥಪೂರ್ಣವಾದುದು. ಒಂದು ಸಾಹಿತ್ಯ ಹಿತವಾಗ ಬೇಕಾದರೆ ಜನಸಾಮಾನ್ಯರತ್ತ ಹೊರಳಬೇಕು. ಹಾಗಾಗಿ ಶರಣರು ಜನ ಸಾಮಾನ್ಯರ ಆಡುಭಾಷೆಯಲ್ಲಿ ವಚನ ಸಾಹಿತ್ಯವನ್ನು ಹೇಳಿದರು. ಆ ಮೂಲಕ ಮೌಡ್ಯತೆ, ಅಸಮಾನತೆಯನ್ನು ಹೋಗಲಾಡಿಸುವಂತೆ ಮಾಡಿದರು ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಮೇಟಿ ಮುದಿಯಪ್ಪಮಾತನಾಡಿ, ಸಮಾಜದ ಒಳಿತಿಗಾಗಿ ಹೋರಾಡಿದ ಶರಣರ ತತ್ವ ಇಂದಿಗೂ ಪ್ರಸ್ತುತ. ಅದನ್ನು ಎಲ್ಲೆಡೆ ಪಸರಿಸುವ ಸಾಣೆಹಳ್ಳಿ ಸ್ವಾಮೀಜಿಯವರ ಮತ್ತೆ ಕಲ್ಯಾಣ ಅಭಿಾನ ಅರ್ಥ ಪೂರ್ಣವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ರಾಮಚಂದ್ರ ಅಡಿಗ ಮಾತನಾಡಿ, ತಾಳ್ಮೆ ಇಲ್ಲದಿದ್ದರೆ ಸಾಧನೆ ಸಾದ್ಯವಿಲ್ಲ. ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ ಎಂದು ಅಭಿಪ್ರಾಯ ಪಟ್ಟರು.
ಡಾ.ನಿರಂಜನ್ ಯು.ಸಿ., ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಿತ್ಯಾನಂದ ಎನ್, ಉಪ ನ್ಯಾಸಕ ರುದ್ರಪ್ಪಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ದೀಪಿಕಾ ವಂದಿಸಿದರು. ಉಪನ್ಯಾಸಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.







