ವರ್ಗದ ಕುಮ್ಕಿ ಜಾಗವನ್ನು ವರ್ಗ ಜಮೀನು ಮಾಲಕರಿಗೆ ಖಾಯಂ ಮಾಡದಂತೆ ಮನವಿ

ಬಂಟ್ವಾಳ, ಜು. 26: ವರ್ಗದ ಕುಮ್ಕಿ ಜಾಗವನ್ನು ವರ್ಗ ಜಮೀನು ಮಾಲಕರಿಗೆ ಖಾಯಂ ಮಾಡದೆ ಸರಕಾರದ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ ಹಾಗೂ ಬಡವ, ನಿವೃತ್ತ ಸೈನಿಕರಿಗೆ ಹಂಚಬೇಕು ಎಂದು ಒತ್ತಾಯಿಸಿ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ನಿಯೋಗವು ಶುಕ್ರವಾರ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿತು.
ರಾಜ್ಯದಲ್ಲಿ ಎಷ್ಟೋ ವರ್ಗದ ಜಾಗದವರು ಅವರ ವರ್ಗ ಜಮೀನಿನ ಲಗ್ತಿ ಕುಮ್ಕಿ ಸ್ಥಳ ಎಂದು ಎಕ್ರಾನುಗಟ್ಟಲೆ ಸ್ಥಳವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ, ಅದೇ ರೀತಿ ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಜಮೀನಿನ ಕೊರತೆಯಿಂದ ನಿವೇಶನ ರಹಿತವಾಗಿದ್ದಾರೆ. ಜೊತೆಗೆ ಕಡು ಬಡವರು ವಾಸ್ತವ್ಯಕ್ಕೆ ಜಾಗದ ಸಮಸ್ಯೆಯಿಂದ ಕೊರಗುತ್ತಿದ್ದಾರೆ. ಹಾಗಾಗಿ ಬಡವರ ಕಣ್ಣೀರೋರಸುವ ಉದ್ದೇಶದಿಂದ ಅಂತಹ ಜಾಗವನ್ನು ಅಧಿಕಾರಿಗಳು ಗುರುತಿಸಿ ಸರಕಾರದ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನಕ್ಕೆ, ಬಡವರಿಗೆ ನಿವೇಶನ ಮಂಜೂರಾತಿ ಬಗ್ಗೆ, ನಿವೃತ್ತ ಸೈನಿಕರಿಗೆ ಕಾಯ್ದಿರಿಸುವಂತೆ ಮನವಿ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಸಿದ್ದೀಕ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಲ್ಲಡ್ಕ, ಸಮಾಜಿಕ ಕಾರ್ಯಕರ್ತ ಬಾನುಪ್ರಕಾಶ್, ಪ್ರಮುಖರಾದ ಮುಹಮ್ಮದ್ ನಂದಾವರ, ವಾಸು ಪೂಜಾರಿ ಕಡೇಶಿವಾಲಯ ಮತ್ತಿತರರು ಉಪಸ್ಥಿತರಿದ್ದರು





