ಬಾಲಕೋಟ್ ದಾಳಿಯಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸುವ ಬಾಂಬ್‌ಗಳನ್ನು ಬಳಸಬೇಕಿತ್ತು:ವಾಯುಪಡೆ ಮುಖ್ಯಸ್ಥ

ಹೊಸದಿಲ್ಲಿ,ಜು.26: ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಕೋಟ್‌ನಲ್ಲಿಯ ಭಯೋತ್ಪಾದಕ ಶಿಬಿರದ ಮೇಲೆ ವಾಯುದಾಳಿಗಳನ್ನು ನಡೆಸಿದ್ದ ಸಂದರ್ಭದಲ್ಲಿ ಭಾರತೀಯ ಯುದ್ಧವಿಮಾನಗಳು ಇಡೀ ಕಟ್ಟಡವನ್ನು ಧ್ವಂಸಗೊಳಿಸುವ ಬಾಂಬ್‌ಗಳನ್ನು ಹಾಕಬೇಕಿತ್ತು ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ಅವರು ಹೇಳಿದ್ದಾರೆ. ಯುದ್ಧವಿಮಾನಗಳು ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್‌ನ ಪೆನೆಟ್ರೇಟರ್ ವೇರಿಯಂಟ್‌ಗಳ ಮೂಲಕ ಭಯೋತ್ಪಾದಕ ತರಬೇತಿ ಶಿಬಿರದ ಮೆಲೆ ದಾಳಿ ನಡೆಸಿದ್ದವು. ಈ ಮಾದರಿಯ ಬಾಂಬ್‌ಗಳು ಕಟ್ಟಡಗಳನ್ನು ಧ್ವಂಸಗೊಳಿಸುವುದಿಲ್ಲ,ಬದಲಿಗೆ ಕಟ್ಟಡದ ಛಾವಣಿಗೆ ರಂಧ್ರವನ್ನುಂಟು ಮಾಡಿ ಒಳಗೆ ತೂರಿಕೊಂಡ ಬಳಿಕ ಸ್ಫೋಟಿಸಿ ಜನರನ್ನು ಕೊಲ್ಲುತ್ತವೆ.
ಶುಕ್ರವಾರ ಕಾರ್ಗಿಲ್ ವಿಜಯೋತ್ಸವದ ಸಂದರ್ಭದಲ್ಲಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಧನೋವಾ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಭಾರತೀಯ ಉಪಗ್ರಹಗಳ ಮೂಲಕ ದಾಳಿಯ ಪರಿಣಾಮದ ಚಿತ್ರಗಳು ಲಭ್ಯವಾಗಿದ್ದರೆ ಸಹಾಯಕಾರಿಯಾಗುತ್ತಿತ್ತು ಎಂದ ಅವರು,‘ಆದರೆ ಮೋಡಗಳು ಅಡ್ಡಿಯಾಗಿದ್ದವು. ಇಂತಹುದೆಲ್ಲ ಸಂಭವಿಸುತ್ತಲೇ ಇರುತ್ತವೆ. ಯುದ್ಧಗಳಲ್ಲಿ ನಿಖರವಾಗಿ ಯೋಜನೆಗಳಂತೆಯೇ ಎಲ್ಲವೂ ನಡೆಯುವುದಿಲ್ಲ. ನಮಗೆ ಭಯೋತ್ಪಾದಕರನ್ನು ಕೊಲ್ಲಬೇಕಿತ್ತು,ನಾವು ಕಟ್ಟಡಗಳನ್ನು ಧ್ವಂಸಗೊಳಿಸುವುದನ್ನು ಬಯಸಿರಲಿಲ್ಲ’ ಎಂದರು.
ದಾಳಿಗಳ ಬಳಿಕ ಭಾರತದ ದಾಳಿಯಿಂದ ಯಾವುದೇ ಸಾವುನೋವು ಅಥವಾ ಹಾನಿ ಉಂಟಾಗಿಲ್ಲ ಎಂದು ಹೇಳಿಕೊಂಡಿದ್ದ ಪಾಕಿಸ್ತಾನವು,ಭಾರತೀಯ ಬಾಂಬ್‌ಗಳ ದಾಳಿಗೆ ಗುರಿಯಾಗಿದ್ದವು ಎನ್ನಲಾದ ಬಯಲು ಪ್ರದೇಶಗಳು ಮತ್ತು ಮರಗಳ ಚಿತ್ರಗಳನ್ನು ಬಿಡುಗಡೆ ಮಾಡಿತ್ತು.







