ಪೊಕ್ಸೊ ಪ್ರಕರಣಗಳಲ್ಲಿ ತ್ವರಿತ ನ್ಯಾಯಕ್ಕಾಗಿ ಹೆಚ್ಚುವರಿ ಮಾಹಿತಿಗಾಗಿ ಕಾಯುವುದಿಲ್ಲ:ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಜು.26: ಮಕ್ಕಳ ಅತ್ಯಾಚಾರ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನಕ್ಕಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ)ಯಡಿ ಪ್ರಕರಣಗಳ ಕುರಿತು ಹೆಚ್ಚುವರಿ ಮಾಹಿತಿಗಳಿಗಾಗಿ ಕಾಯದೇ ಆದೇಶಗಳನ್ನು ಹೊರಡಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
‘ಮುಂದಿನ/ಹೆಚ್ಚುವರಿ ಮಾಹಿತಿಗಳನ್ನು ಪಡೆದುಕೊಳ್ಳಲು ಪ್ರಕರಣದ ವಿಚಾರಣೆಯನ್ನು ಮುಂದೂಡುವ ಬದಲು ಕೆಲವು ನಿರ್ದೇಶನಗಳನ್ನು ಹೊರಡಿಸಲು ನಾವು ಒಲವು ಹೊಂದಿದ್ದೇವೆ ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠವು ಹೇಳಿತು.
ಮಕ್ಕಳ ವಿರುದ್ಧ ಅತ್ಯಾಚಾರದ ಘಟನೆಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಬಗ್ಗೆ ತಾನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡಿರುವ ವಿಷಯದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
ದೇಶಾದ್ಯಂತ ಪೊಕ್ಸೊ ಕಾಯ್ದೆಯಡಿ ಬಾಕಿಯಿರುವ ಒಟ್ಟು ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಕ್ರೋಢೀಕರಿಸುವಂತೆ ಪೀಠದಿಂದ ನಿರ್ದೇಶವನ್ನು ಪಡೆದಿದ್ದ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಎಸ್.ಎಸ್.ರಥಿ ಅವರು ಅದಕ್ಕಾಗಿ ಇನ್ನಷ್ಟು ಸಮಯಾವಕಾಶವನ್ನು ಕೋರಿದರಾದರೂ,ನಿರ್ದೇಶಗಳನ್ನು ಹೊರಡಿಸುವ ತನ್ನ ಮಾರ್ಗದಲ್ಲಿ ಅಡ್ಡಿಯಾಗದಂತೆ ಆ ಕೆಲಸವನ್ನು ಮುಂದುವರಿಸಲು ಪೀಠವು ಸೂಚಿಸಿತು.
ನಮಗೆ ಹೆಚ್ಚಿನ ಮಾಹಿತಿಗಳ ಅಗತ್ಯವೇನಿದೆ? ನಾವು ನಿರ್ದೇಶಗಳನ್ನು ಹೊರಡಿಸುತ್ತೇವೆ ಎಂದು ಪೀಠವು ತಿಳಿಸಿತು.
ಇದು ನಿಮ್ಮ ಅತ್ಯುನ್ನತ ಆದ್ಯತೆಯಾಗಬೇಕಿರುವ ವಿಷಯವಾಗಿದೆ ಎಂದು ತನಗೆ ನೆರವಾಗುತ್ತಿರುವ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಪೀಠವು ಹೇಳಿತು.
ಪೊಕ್ಸೊ ಪ್ರಕರಣಗಳ ವಿಚಾರಣೆಗಾಗಿಯೆ ಕೇಂದ್ರದ ಆರ್ಥಿಕ ನೆರವಿನೊಂದಿಗೆ ಪ್ರತಿ ಜಿಲ್ಲೆಯಲ್ಲಿಯೂ ನಿಯೋಜಿತ ನ್ಯಾಯಾಲಯ ಸ್ಥಾಪನೆಯ ಉಸ್ತುವಾರಿ ಹೊಣೆಯನ್ನು ಹೈಕೋರ್ಟ್ ನ್ಯಾಯಾಧೀಶರೋರ್ವರಿಗೆ ವಹಿಸಬೇಕು ಎಂಬ ಮೆಹತಾ ಅವರ ಸಲಹೆಯನ್ನು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಳ್ಳಲಿಲ್ಲ. ಹೆಚ್ಚಿನ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರಿಗೆ ಕೆಲಸದ ಒತ್ತಡವಿರುತ್ತದೆ ಎನ್ನುವುದನ್ನು ಅದು ಬೆಟ್ಟು ಮಾಡಿತು.
ತಾನು ಮಾಹಿತಿಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಸಂಪರ್ಕಿಸಿದ್ದೆ,ಆದರೆ ಅದು ಅಂತಹ ಯಾವುದೇ ಮಾಹಿತಿಯನ್ನು ಸಂಗ್ರಹಿಸುತ್ತಿಲ್ಲ. ಹೀಗಾಗಿ ತಾನು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಂತಹ ಇತರ ಆರು ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಬೇಕಾಗಿದೆ ಎಂದು ರಥಿ ತಿಳಿಸಿದಾಗ,ಅವರೆಲ್ಲ ಈ ಎಲ್ಲ ವರ್ಷಗಳಲ್ಲಿ ಏನು ಮಾಡುತ್ತಿದ್ದರು ಎಂದು ಪೀಠವು ಕಟುವಾಗಿ ಪ್ರಶ್ನಿಸಿತು.
ಪೊಕ್ಸೊ ಕಾಯ್ದೆಯಡಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಕರಣಗಳು (44,376) ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (19,000ಕ್ಕೂ ಹೆಚ್ಚು) ಮತ್ತು ಮಧ್ಯಪ್ರದೇಶ (9,000ಕ್ಕೂ ಹೆಚ್ಚು) ರಾಜ್ಯಗಳಿವೆ ಎಂದು ರಥಿ ತಿಳಿಸಿದರು.







