ದೇಶಾದ್ಯಂತ 80,000 ಸಲಹೆಗಳ ಸ್ವೀಕಾರ: ಗೌರೀಶ್
ಕರಡು ರಾಷ್ಟ್ರೀಯ ಶಿಕ್ಷಣ ನೀತಿ -2019

ಉಡುಪಿ, ಜು.26: ಕರಡು ರಾಷ್ಟ್ರೀಯ ಶಿಕ್ಷಣ ನೀತಿ -2019ಕ್ಕೆ ಸಂಬಂಧಿಸಿ ದಂತೆ ಸಲಹೆ ನೀಡಲು ಜು.31ರವರೆಗೆ ಅವಕಾಶ ನೀಡಲಾಗಿದ್ದು, ಈವರೆಗೆ ದೇಶಾದ್ಯಂತ 80,000 ಸಲಹೆಗಳು ಬಂದಿವೆ. ಅಂತಿಮವಾಗಿ ಒಂದು ಲಕ್ಷಕ್ಕೂ ಅಧಿಕ ಸಲಹೆ ಬರುವ ಸಾಧ್ಯತೆ ಇದೆ. ಪ್ರತಿಯೊಂದು ಸಲಹೆಯನ್ನು ಪರಿಶೀಲನೆ ನಡೆಸಿ ಅಂತಿಮ ನೀತಿಯನ್ನು ತಯಾರಿಸಲಾಗುವುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ರಚನಾ ಸಮಿತಿಯ ತಾಂತ್ರಿಕ ವಿಭಾಗದ ಮುಖ್ಯ ಸಲಹೆಗಾರ ಹಾಗೂ ಬೆಂಗಳೂರಿನ ಸಾಮಾಜಿಕ ಹಾಗೂ ಶೈಕ್ಷಣಿಕ ಅಧ್ಯಯನ ಕೇಂದ್ರದ ಉಪನಿರ್ದೇಶಕ ಗೌರೀಶ್ ಹೇಳಿದ್ದಾರೆ.
ಬೆಂಗಳೂರಿನ ಸಾಮಾಜಿಕ ಹಾಗೂ ಶೈಕ್ಷಣಿಕ ಅಧ್ಯಯನ ಕೇಂದ್ರ ಹಾಗೂ ಉಡುಪಿ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾದ ಕರಡು ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕುರಿತ ಸಂವಾದ ಕಾರ್ಯಕ್ರುದಲ್ಲಿ ಅವರು ಮಾತನಾಡುತಿದ್ದರು.
ಮಕ್ಕಳ ಹಾಗೂ ದೇಶದ ಭವಿಷ್ಯ ದೃಷ್ಠಿಕೋನದೊಂದಿಗೆ ಈ ಶಿಕ್ಷಣ ನೀತಿ ಯನ್ನು ತಯಾರಿಸಲಾಗುತ್ತದೆ. ಎಲ್ಲ ವಯಸ್ಸಿನವರಿಗೂ ಗುಣಮಟ್ಟದ ಶಿಕ್ಷಣ ವನ್ನು ಪರಿಣಾಮಕಾರಿಯಾಗಿ ನೀಡುವುದು ಈ ನೀತಿಯ ಪ್ರಮುಖ ಉದ್ದೇಶ ವಾಗಿದೆ. ಆದುದರಿಂದ ಈ ನೀತಿ ಸಮಗ್ರ ದೃಷ್ಠಿಕೋನವನ್ನು ಹೊಂದಿದೆ ಎಂದು ಅವರು ಹೇಳಿದರು.
ಭಾರತ ಕೇಂದ್ರೀಕೃತವಾಗಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನ ಈ ಹಿಂದಿನ ನೀತಿಗಳಲ್ಲೂ ಮಾಡಲಾಗಿತ್ತು. ಆದರೂ ಕೊಲೋನಿಯಲ್ ಶಿಕ್ಷಣ ವ್ಯವಸ್ಥೆಯನ್ನೇ ಇಂದು ಕೂಡ ಅಭ್ಯಾಸ ಮಾಡುತ್ತಿದ್ದೇವೆ. ನಮಲ್ಲಿ ನಮ್ಮದೇ ಆದ ಶಿಕ್ಷಣ ವ್ಯವಸ್ಥೆ ಹಾಗೂ ವಿಚಾರಧಾರೆ ಇದೆ. ಜಗತ್ತಿನ ಯಾವುದೇ ಸವಾಲು ಗಳನ್ನು ಎದುರಿಸುವ ಶಕ್ತಿ ನಮ್ಮ ಶಿಕ್ಷಣ ವ್ಯವಸ್ಥೆ ಇದೆ. ಇದು ಭಾರತ ಕೇಂದ್ರೀಕೃತ ಶಿಕ್ಷಣ ನೀತಿಯಾಗಿದೆ ಎಂದರು.
ಪ್ರಸ್ತುತ ಪೂರ್ವ ಪ್ರಾಥಮಿಕ ಶಿಕ್ಷಣವು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಇದೆಯೇ ಹೊರತು ಶಿಕ್ಷಣ ಇಲಾಖೆಯಲ್ಲಿ ಇಲ್ಲ. ಇದನ್ನು ಶಿಕ್ಷಣ ಇಲಾಖೆಯ ಚೌಕಟ್ಟಿನೊಳಗೆ ತರಲು ಗಂಭೀರವಾದ ಸಲಹೆ ಯನ್ನು ಈ ನೀತಿಯಲ್ಲಿ ನೀಡಲಾಗಿದೆ. ಹೀಗೆ ಮೂರು ವರ್ಷದ ಮಕ್ಕಳ ಶಿಕ್ಷಣ ವನ್ನು ಶಾಲೆಯ ಭಾಗವನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಎಂಬ ವರ್ಗೀಕರಣ ಮಾಡಲಾಗಿದ್ದು, ಒಂದರಿಂದ 12ನೆ ತರಗತಿವರೆಗೆ ಶಾಲಾ ಶಿಕ್ಷಣ ಎಂಬುದಾಗಿ ಪರಿಗಣಿಸಲಾ ಗಿದೆ. ಒತ್ತಡ ಮುಕ್ತ ಪರೀಕ್ಷೆ ವ್ಯವಸ್ಥೆಯನ್ನು ಈ ನೀತಿಯ ಮೂಲಕ ಜಾರಿಗೆ ತರಲಾಗುತ್ತದೆ. ಬೋರ್ಡ್ ಆಫ್ ಏಜ್ಯುಕೇಶನ್ ಪರೀಕ್ಷೆ ನಡೆಸಿದರೆ, ಸ್ಟೇಟ್ ಕೌನ್ಸಿಲ್ ಆಫ್ ಏಜ್ಯುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಪಠ್ಯ ಪುಸ್ತಕಗಳನ್ನು ತಯಾರಿಸುವ ಕಾರ್ಯ ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.
ಪದವಿ ಶಿಕ್ಷಣದಲ್ಲಿ ವಿಜ್ಞಾನ, ಕಲೆ, ವಾಣಿಜ್ಯ ಎಂಬುದಾಗಿ ಪ್ರತ್ಯೇಕವಾಗಿ ಕಲಿಸದೆ ಬ್ಯಾಚುಲರ್ ಆಫ್ ಆರ್ಟ್ಸ್/ಏಜ್ಯುಕೇಶನ್ ರೂಪದಲ್ಲಿ ನೀಡಲಾಗು ತ್ತದೆ. ಇಲ್ಲಿ ಮೇಜರ್ ಮತ್ತು ಮೈನರ್ ವಿಷಯವನ್ನು ಪರಿಚಯಿಸಲಾಗುತ್ತಿದೆ. ವಿಜ್ಞಾನ ವಿದ್ಯಾರ್ಥಿ ಕಲೆಯ ಒಂದು ವಿಷಯವನ್ನು ಕೂಡ ಅಭ್ಯಸಿಸಬಹುದು. ಅಲ್ಲದೆ ಸಂಗೀತ, ಕ್ರೀಡೆಯನ್ನು ಕೂಡ ಆಯ್ಕೆ ಮಾಡಲು ಅವಕಾಶ ಕಲ್ಪಿಸ ಲಾಗುತ್ತದೆ ಎಂದು ಅವರು ಹೇಳಿದರು.
ನಾಲ್ಕು ವರ್ಷ ಬ್ಯಾಚುಲರ್ ಆಫ್ ಏಜ್ಯುಕೇಶನ್‌ನ ಪ್ರತಿ ವರ್ಷದಲ್ಲೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಮೂರು ವರ್ಷ ಪದವಿ ಮುಗಿಸಿದ ವಿದ್ಯಾರ್ಥಿ ಎರಡು ವರ್ಷ ಸ್ನಾತಕೋತ್ತರ ಪದವಿ ಮಾಡಿದ ನಂತರ ಪಿಎಚ್‌ಡಿ ಮಾಡಬಹುದಾಗಿದೆ. ಆದರೆ ನಾಲ್ಕು ವರ್ಷ ಬ್ಯಾಚುಲರ್ ಆಫ್ ಏಜ್ಯುಕೇಶನ್ ಪಡೆದ ವಿದ್ಯಾರ್ಥಿ ನೇರವಾಗಿ ಪಿಎಚ್‌ಡಿ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಕೆಲವೊಂದು ಬದಲಾವಣೆಯೊಂದಿಗೆ ಆರ್‌ಟಿಐ ಕಾಯ್ದೆಯನ್ನು 3-18 ವರ್ಷದವರೆಗೆ ವಿಸ್ತರಿಸಲು ಸಲಹೆ ನೀಡಲಾಗಿದೆ ಎಂದ ಅವರು, ಈ ದೇಶದ ಎಲ್ಲ ಯುವ ಮತ್ತು ವಯಸ್ಕರಿಗೆ ಶಿಕ್ಷಣ ನೀಡುವ ಮೂಲಕ 2030ರ ವೇಳೆ ಶೇ.100ರಷ್ಟು ಸಾಕ್ಷರತೆ ಹೊಂದುವ ಗುರಿಯನ್ನು ಈ ಶಿಕ್ಷಣ ನೀತಿ ಹೊಂದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ.ವಿಜಯ, ಸಂವಾದ ಕಾರ್ಯಕ್ರಮದ ಸಂಚಾಲಕ ಡಾ.ಶಿವಾನಂದ ನಾಯಕ್ ಉಪಸ್ಥಿತರಿದ್ದರು.







