ವ್ಯಾಟ್ಸ್ ಆ್ಯಪ್‌ನಿಂದ ಭಾರತದಲ್ಲಿ ಶೀಘ್ರದಲ್ಲೇ ಈ ಸೇವೆ ಆರಂಭ

ಬೆಂಗಳೂರು, ಜು. 26: ವ್ಯಾಟ್ಸ್ ಆ್ಯಪ್ ಈ ವರ್ಷಾಂತ್ಯ ಭಾರತದಲ್ಲಿ ತನ್ನ ಪಾವತಿ ಸೇವೆ ಆರಂಭಿಸಲಿದೆ ಎಂದು ವ್ಯಾಟ್ಸ್ ಆ್ಯಪ್‌ನ ಗ್ಲೋಬಲ್ ಹೆಡ್ ವಿಲ್ ಕ್ಯಾಚ್‌ಕಾರ್ಟ್ ಬುಧವಾರ ತಿಳಿಸಿದ್ದಾರೆ. ಭಾರತದಲ್ಲಿ ಸುಮಾರು 400 ದಶಲಕ್ಷ ಬಳಕೆದಾರರು ಇರುವ ಸಂದೇಶ ರವಾನೆ ಆ್ಯಪ್ ವ್ಯಾಟ್ಸ್ ಆ್ಯಪ್ ಕಳೆದ ಒಂದು ವರ್ಷದಿಂದ ತನ್ನ ಪಾವತಿ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. ಸಂದೇಶ ಕಳುಹಿಸುವಷ್ಟೇ ಸುಲಭವಾಗಿ ಹಣ ರವಾನಿಸುವ ಉದ್ದೇಶವನ್ನು ವ್ಯಾಟ್ಸ್ ಆ್ಯಪ್ ಕಂಪೆನಿಯ ಪಾವತಿ ಸೇವೆ ಹೊಂದಿದೆ ಎಂದು ಕ್ಯಾಚ್‌ಕಾರ್ಟ್ ಹೇಳಿದ್ದಾರೆ.
‘‘ನಾವು ಈ ಹಕ್ಕು ಪಡೆದುಕೊಂಡರೆ, ಇದು ಆರ್ಥಿಕ ಒಳಗೊಳ್ಳುವಿಕೆಗೆ ಉತ್ತೇಜನ ನೀಡಲಿದೆ ಹಾಗೂ ತ್ವರಿತವಾಗಿ ಬೆಳವಣಿಗೆಯಾಗುತ್ತಿರುವ ಭಾರತದ ಡಿಜಿಟಲ್ ಆರ್ಥಿಕತೆಯಲಿ ಜನರಿಗೆ ಪ್ರಾಮಖ್ಯತೆ ದೊರೆಯಲಿದೆ’’ ಎಂದು ಅವರು ಹೇಳಿದ್ದಾರೆ. ವ್ಯಾಟ್ಸ್ ಆ್ಯಪ್ ಭಾರತದಲ್ಲಿ ಈಗಾಗಲೇ ಆರಂಭವಾದ ಪೇಟಿಎಂ, ಫೋನ್‌ಪೇ ಹಾಗೂ ಗೂಗಲ್ ಪೇಯೊಂದಿಗೆ ಸ್ಪರ್ಧಿಸುತ್ತಿದೆ. ಫೇಸ್‌ಬುಕ್‌ನ ಮಾಲಕತ್ವ ಹೊಂದಿರುವ ವ್ಯಾಟ್ಸ್‌ಆ್ಯಪ್‌ಗೆ ಜಾಗತಿಕವಾಗಿ 1.5 ಶತಕೋಟಿ ಬಳಕೆದಾರರಿದ್ದಾರೆ. ಇತರ ಮಾರುಕಟ್ಟೆಗಳಲ್ಲಿ ಕೂಡ ತನ್ನ ಪಾವತಿ ಸೇವೆ ಆರಂಭಿಸಲು ವ್ಯಾಟ್ಸ್ ಆ್ಯಪ್ ಎದುರು ನೋಡುತ್ತಿದೆ.







