ಯುಪಿಸಿಎಲ್: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭದ್ರತಾ ಸಿಬ್ಬಂದಿಗಳ ಪ್ರತಿಭಟನೆ

ಪಡುಬಿದ್ರಿ: ಅದಾನಿ ಒಡೆತನದ ಯುಪಿಸಿಎಲ್ ವಿದ್ಯುತ್ ಸ್ಥಾವರ ಕಂಪೆನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಾರ್ಡಿಯನ್ ಸೆಕ್ಯೂರಿಟಿ ಸಂಸ್ಥೆ ಕಾರ್ಮಿಕರಿಗೆ ವೇತನ ಹೆಚ್ಚಳದಲ್ಲಿ ತಾರತಮ್ಯ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಯುಪಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಶುಕ್ರವಾರ ಕಂಪೆನಿ ದ್ವಾರದ ಎದುರು ಪ್ರತಿಭಟನೆ ನಡೆಸಿತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೀಡಿದ ಮನವಿಯಮತೆ ಕಂಪೆನಿಯ ಅಧಿಕಾರಿಗಳಾದ ಸಂಜಯ್ ಹೆರ್ಗಡೆ, ಶಶಿಧರ್, ಭದ್ರತಾ ಸಿಬ್ಬಂದಿ ಆಧಿಕಾರಿ ನಿಲಕಂಠಯ್ಯ, ಗುತ್ತಿಗೆದಾರ ಪಿ. ನಾರಾಯಣ್ ಹಾವಗೂ ಕಂಪೆನಿ ಭದ್ರತಾ ಸಿಬ್ಬಂದಿಗಳ ಸಭೆಯನ್ನು ಶುಕ್ರವಾರ ಕರೆದಿತ್ತು. ಆದರೆ ಸಭೆಯಲ್ಲಿ ಬೇಡಿಕೆ ಈಡೇರಿಕೆಗೆ ಕಂಪೆನಿ ಅಧಿಕಾರಿಗಳಿ ನಿರಾಕರಿಸಿದರು. ಸಭೆ ವಿಫಲವಾದ ಹಿನ್ನಲೆಯಲ್ಲಿ ಕಂಪೆನಿ ದ್ವಾರದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಬಳಿಕ ಕಚೇರಿಯ ಅಧಿಕಾರಿಗಳು ಕರೆದ ಸಭೆಯಲ್ಲಿ ಸೆಕ್ಯುರಿಟಿ ಗಾರ್ಡ್ ನೌಕರರಿಗೆ ಮಾಸಿಕ ನೂರು ರೂಪಾಯಿ ಹೆಚ್ಚಳ ಮಾಡಲಾಗುವುದು ಎಂಬ ಅಧಿಕಾರಿಗಳ ಹೇಳಿಕೆಯನ್ನು ನೀಡಿದರು. ಇದನ್ನು ಖಂಡಿಸಿದ ಭದ್ರತಾ ಸಿಬ್ಬಂದಿಗಳು ಸೇರಿ ನೂರು ರೂಪಾಯಿ ಯಂತೆ ಕೂಡಿ ಅವರ ಮುಂದೆ ಇಟ್ಟು ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳು: ಯುಪಿಸಿಎಲ್ ಕಂಪನಿಯಲ್ಲಿ ಕಳೆದ 14ವರ್ಷಗಳಿಂದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಮೂಲ ಸೌಕರ್ಯ ಗಳಿಂದ ವಂಚಿತರಾಗಿದ್ದೇವೆ. ಕಂಪನಿಯಲ್ಲಿ ವಿವಿಧ ಗುತ್ತಿಗೆದಾರರು ಕಾರ್ಯ ನಿರ್ವಹಿಸುತ್ತಿದ್ದು, ಕನಿಷ್ಠ ವೇತನವನೀಡಲಾಗುತ್ತಿದೆ. ಆದರೆ ಭದ್ರತಾ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಎಲ್ಲ ನೌಕರರಿಗೂ ಕನಿಷ್ಠ ವೇತನ ಜಾರಿಗೊಳಿ ಸಬೇಕು. ಆದುದರಿಂದ ಸಮಾನವಾಗಿ ವೇತನ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ವಾರ್ಷಿಕ ಶೇ. 10ರಷ್ಟು ವೇತನ ಹೆಚ್ಚಿಸಬೇಕು. ಹೆಚ್ಚುವರಿ ಕೆಲಸಕ್ಕೆ ಭತ್ಯೆ ನೀಡಬೇಕು. ಕಾರ್ಮಿಕರಿಗೆ ಶೆ. 15ರಷ್ಟು ಬೋನಸ್ ನೀಡಬೇಕು. ಕಂಪೆನಿಯಲ್ಲಿ ಯೂನಿಯನ್ ಕಚೇರಿಯನ್ನು ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ವೇತನ ಹೆಚ್ಚಳವಾಗದಿದ್ದಲ್ಲಿ ಯುಪಿಸಿಎಲ್ ಕಂಪನಿಯ ಎಲ್ಲಾ ನೌಕರರು ಕೂಡಿ ಮುಂದಿನ ತಿಂಗಳಿಂದ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಸಿಐಟಿಯು ಯುಪಿಸಿಎಲ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಲೋಕಯ್ಯ ಹೇಳಿದರು.
ಯುಪಿಸಿಎಲ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಲೋಕಯ್ಯ, ಯುಪಿಸಿಎಲ್ ಎಂಪ್ಲಾಯೀಸ್ ಯೂನಿಯನ್ ಕಾರ್ಯದರ್ಶಿ ವಿಶ್ವಾಸ್, ಸುನಿಲ್, ಹರಿಶ್ಚಂದ್ರ ಶೆಟ್ಟಿ, ಪ್ರತೀಕ್, ಪ್ರಶಾಂತ್, ಹರೀಶ್ ಹಾಗೂ ಸೆಕ್ಯುರಿಟಿ ಗಾರ್ಡ್ ಕಾರ್ಮಿಕರು ಭಾಗವಹಿಸಿದ್ದರು.







