ಪಾವೂರಿನಲ್ಲಿ 'ಹೈನುಗಾರಿಕೆ ತರಬೇತಿ' ಕಾರ್ಯಕ್ರಮ

ಕೊಣಾಜೆ: ಹೈನುಗಾರಿಕೆಯಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಹತ್ತನೇ ಸ್ಥಾನದಲ್ಲಿದೆ ಎಂದು ನ್ಯೂಟ್ರೀಷಿಯನ್ ಕನ್ಸಲ್ಟೆಂಟ್ ಡಾ.ಚೆನ್ನೇಗೌಡ ಹೇಳಿದರು.
ದ.ಕ.ಜಿಲ್ಲಾ ಪಂ., ಮಂಗಳೂರು ಕೃಷಿ ಇಲಾಖೆಯ 2019-20ನೇ ಸಾಲಿನ ಆತ್ಮ ಯೋಜನೆಯಡಿ ಕೆಥೊಲಿಕ್ ಸಭಾ ಪಜೀರ್ ಘಟಕದ ಸಹಕಾರದಲ್ಲಿ ಪಾವೂರು ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ 'ಹೈನುಗಾರಿಕೆ ತರಬೇತಿ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಹಾಲು ಉತ್ಪಾದನೆ ಹೆಚ್ಚಾಗಿದ್ದರೂ ಬಹುಜನರ ಜೀವನ ಇದರಿಂದಲೇ ಸಾಗುವುದರಿಂದ ಸರ್ಕಾರ ಉಳಿದ ಹಾಲಿನಿಂದ ಇತರ ತಿಂಡಿಗಳನ್ನು ತಯಾರಿಸುವ ಮೂಲಕ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಮಾತ್ರವೇ ಸರ್ಕಾರದ ಮೂಲಕ ಹಾಲು ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮಲ್ಲಿ ಪಶು ಸಾಕಾಣಿಕೆಗೆ ಸಾಕಷ್ಟು ವ್ಯವಸ್ಥೆ ಇಲ್ಲದ ಕಾರಣ ಐದಕ್ಕಿಂತ ಕಡಿಮೆ ದನ ಸಾಕುವವರು ಹೈನುಗಾರಿಕೆಯಿಂದ ದೂರವಾಗುತ್ತಿದ್ದಾರೆ. ಭಾರತದಲ್ಲಿ ಮಾತ್ರವೇ ಫ್ಯಾಟ್ ಪರೀಕ್ಷಿಸಿ ಹಾಲು ಖರೀದಿ ಮಾಡಲಾಗುತ್ತಿದೆ, ವಾಸ್ತವವಾಗಿ ಫ್ಯಾಟ್ ಜೊತೆ ನ್ಯೂಟ್ರೀನ್, ಎನರ್ಜಿಯನ್ನೂ ಪರೀಕ್ಷಿಸುವುದು ಮುಖ್ಯ ಎಂದರು.
ಕಾರ್ಯಕ್ರಮ ಸಂಚಾಲಕರಾದ ವಲೇರಿಯನ್ ಡಿಸೋಜ, ಅವಿಲ್ ಡಿಸೋಜ ಉಪಸ್ಥಿತರಿದ್ದರು. ತಲಪಾಡಿ ಪಶು ಆಸ್ಪತ್ರೆಯ ಸೆವರಿನ್ ರಚನಾ ಡಿಸೋಜ ಸ್ವಾಗತಿಸಿದರು. ಬಜ್ಪೆ ಪಶುವೈದ್ಯ ಅಶೋಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.







