ಬಿಬಿಎಂಪಿ: ಎರಡು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಿಗದ ಸೌಲಭ್ಯಗಳು

ಬೆಂಗಳೂರು, ಜು.26: ಶಾಲಾ-ಕಾಲೇಜುಗಳು ಆರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರೂ ಇದುವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಲಾ ಮಕ್ಕಳಿಗೆ ಸಿಗಬೇಕಾದ ಸಮವಸ್ತ್ರ, ಶೂ, ಬ್ಯಾಗ್ ಸೇರಿದಂತೆ ಮತ್ತಿತರೆ ಸೌಲಭ್ಯಗಳು ಸಿಕ್ಕಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದಲ್ಲಿ 90 ಶಿಶುವಿಹಾರ, 32 ಪ್ರೌಢಶಾಲೆ, 15 ಪ್ರಾಥಮಿಕ ಶಾಲೆ, 14 ಪದವಿ ಪೂರ್ವ ಹಾಗೂ ನಾಲ್ಕು ಪದವಿ ಕಾಲೇಜುಗಳು ಸೇರಿದಂತೆ ಒಟ್ಟಾರೆ 155 ಶಾಲಾ-ಕಾಲೇಜುಗಳು ಬರುತ್ತವೆ. ಅದರಲ್ಲಿ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಪಾಲಿಕೆಯ ವ್ಯಾಪ್ತಿಯ ಶಾಲೆಗಳಿಗೆ ಸರಕಾರದಿಂದ ನೀಡುವ ಪುಸ್ತಕಗಳು ಸಿಕ್ಕಿದ್ದು ಬಿಟ್ಟರೆ, ಬಿಬಿಎಂಪಿಯಿಂದ ನೀಡಬೇಕಾದ ಸೌಲಭ್ಯಗಳು ಸಿಕ್ಕಿಲ್ಲ. ಕಳೆದ ತಿಂಗಳೇ ಮಕ್ಕಳಿಗೆ ಪುಸ್ತಕ, ಬ್ಯಾಗ್, ಶೂ, ಸಾಕ್ಸ್ ಸೇರಿ ಮತ್ತಿತರೆ ವಸ್ತುಗಳನ್ನು ವಿತರಣೆ ಮಾಡುತ್ತೇವೆಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದರೂ, ಇದುವರೆಗೂ ಯಾವುದೇ ವಸ್ತುಗಳನ್ನು ವಿತರಿಸಿಲ್ಲ.
ಬಿಬಿಎಂಪಿಯ ವಾರ್ಷಿಕ ಬಜೆಟ್‌ನಲ್ಲಿ ಶಾಲಾ ಮಕ್ಕಳಿಗೆ ನೀಡುವ ಸೌಲಭ್ಯಗಳಿಗಾಗಿ ಒಂದು ಕೋಟಿಯಷ್ಟು ಅನುದಾನ ಮೀಸಲಿಡಲಾಗುತ್ತದೆ. ಆದರೆ, ಸರಿಯಾದ ಸಮಯಕ್ಕೆ ಸೌಲಭ್ಯಗಳು ಸಿಗದಿದ್ದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಾಲೆಗಳು ಆರಂಭವಾದ ಕೂಡಲೇ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ನೋಟು ಪುಸ್ತಕ, ಶೂ, ಬ್ಯಾಗ್, ಸ್ವೆಟರ್‌ಗಳನ್ನು ವಿತರಣೆ ಮಾಡಬೇಕೆಂದು ಪಾಳಿಕೆ ಸದಸ್ಯರು ಪ್ರತಿ ವರ್ಷವೂ ಕೌನ್ಸಿಲ್ ಸಭೆಯಲ್ಲಿ ಧ್ವನಿ ಎತ್ತುತ್ತಲೇ ಇದ್ದಾರೆ. ಆದರೂ, ಅಧಿಕಾರಿಗಳ ನಿರ್ಲಕ್ಷದಿಂದ ಸಮಸ್ಯೆ ಪುನರಾವರ್ತನೆಯಾಗುತ್ತಿದೆ ಎಂದು ಅಪಾದಿಸಿದ್ದಾರೆ.
ಬಿಬಿಎಂಪಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯಲ್ಲಾಗುತ್ತಿದ್ದ ವಿಳಂಬವನ್ನು ತಪ್ಪಿಸಲು 2017-18ರಲ್ಲಿ ಮೂರು ವರ್ಷಗಳಿಗೊಮ್ಮೆ ಟೆಂಡರ್ ಕರೆಯಲು ನಿರ್ಧರಿಸಲಾಯಿತು. ಅದರಂತೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ, ಗುತ್ತಿಗೆದಾರರ ನಿರಾಸಕ್ತಿಯಿಂದ ಸಕಾಲಕ್ಕೆ ಸೌಲಭ್ಯಗಳು ಕಲ್ಪಿಸಲಾಗಿಲ್ಲ ಎಂಬುದು ಅಧಿಕಾರಿಗಳು ನೀಡುವ ಸಿದ್ಧ ಉತ್ತರವಾಗಿದೆ ಎಂದು ಶಾಲೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವವರಲ್ಲಿ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಡಬೇಕಾದ ಪಾಲಿಕೆಯ ಶಿಕ್ಷಣ ವಿಭಾಗವು ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನೆಡೆಯುಂಟಾಗುತ್ತಿದೆ. ಹರಿದ ಬಟ್ಟೆ, ಕಿತ್ತು ಹೋದ ಶೂ ಧರಿಸಿ ಶಾಲೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ತಿಂಗಳ ಹಿಂದೆಯೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು, ಸಮವಸ್ತ್ರ, ಶೂ, ಸ್ವೆಟರ್‌ಗಳನ್ನು ದಾಸ್ತಾನಿಟ್ಟುಕೊಳ್ಳಲಾಗಿದೆ. ಶೀಘ್ರದಲ್ಲೆ ಎಲ್ಲರಿಗೂ ವಿತರಣೆ ಮಾಡಲಾಗುತ್ತದೆ. ಸಮವಸ್ತ್ರದ ಬಣ್ಣದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಕಳೆದ ವರ್ಷದಂತೆಯೇ ಈ ಬಾರಿಯೂ ಅದೇ ಮಾದರಿಯ ಸಮವಸ್ತ್ರ, ಶೂ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಬ್ಲೆಜರ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.







