ಗೂಗಲ್‌ನಿಂದ 344 ಕೋಟಿ ರೂ. ಪರಿಹಾರ ಕೋರಿ ತುಳಸಿ ಗ್ಯಾಬರ್ಡ್ ಮೊಕದ್ದಮೆ
ವಾಶಿಂಗ್ಟನ್, ಜು. 26: ಅಮೆರಿಕ ಸಂಸತ್ತಿನ ಪ್ರಥಮ ಹಿಂದೂ ಸದಸ್ಯೆ ಹಾಗೂ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ತುಳಸಿ ಗ್ಯಾಬರ್ಡ್, ತಂತ್ರಜ್ಞಾನ ದೈತ್ಯ ಗೂಗಲ್ ವಿರುದ್ಧ 50 ಮಿಲಿಯ ಡಾಲರ್ (ಸುಮಾರು 344 ಕೋಟಿ ರೂಪಾಯಿ) ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಗಾಗಿ ನಾನು ನಡೆಸುತ್ತಿರುವ ಪ್ರಚಾರದ ಬಗ್ಗೆ ಗೂಗಲ್ ‘ತಾರತಮ್ಯ ಧೋರಣೆ’ ಅನುಸರಿಸುತ್ತಿದೆ ಹಾಗೂ ನನ್ನ ವಾಕ್ ಸ್ವಾತಂತ್ರವನ್ನು ಅದು ಹತ್ತಿಕ್ಕುತ್ತಿದೆ ಎಂಬುದಾಗಿ ತುಳಸಿ ಆರೋಪಿಸಿದ್ದಾರೆ.
ಜೂನ್‌ನಲ್ಲಿ ನಡೆದ ಮೊದಲ ಡೆಮಾಕ್ರಟಿಕ್ ಚರ್ಚೆಯ ಬಳಿಕ ಗೂಗಲ್ ನನ್ನ ಪ್ರಚಾರ ಜಾಹೀರಾತು ಖಾತೆಯನ್ನು ಸ್ವಲ್ಪ ಕಾಲ ಅಮಾನತಿನಲ್ಲಿಡುವ ಮೂಲಕ ನನ್ನ ವಾಕ್ ಸ್ವಾತಂತ್ರದ ಮೇಲೆ ದಾಳಿ ನಡೆಸಿದೆ ಎಂಬುದಾಗಿ 38 ವರ್ಷದ ತುಳಸಿ ತನ್ನ ದಾವೆಯಲ್ಲಿ ಆರೋಪಿಸಿದ್ದಾರೆ.
ಅಮೆರಿಕದ ಸೇನೆಯ ಪರವಾಗಿ ಇರಾಕ್‌ನಲ್ಲಿ ಯುದ್ಧ ಮಾಡಿರುವ ತುಳಸಿ ಗುರುವಾರ ಲಾಸ್ ಏಂಜಲಿಸ್‌ನಲ್ಲಿರುವ ಫೆಡರಲ್ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಹವಾಯಿಯ ಎರಡನೇ ಕಾಂಗ್ರೆಸ್ ಜಿಲ್ಲೆಯನ್ನು 2013ರಿಂದ ಪ್ರತಿನಿಧಿಸುತ್ತಿದ್ದಾರೆ.
ಜೂನ್ 27 ಮತ್ತು 28ರಂದು ಆರು ಗಂಟೆಗಳ ಕಾಲ ಪ್ರಚಾರ ಜಾಹೀರಾತು ಖಾತೆಯನ್ನು ಗೂಗಲ್ ತಡೆಹಿಡಿದಿತ್ತು ಹಾಗೂ ಆ ಮೂಲಕ ನಿಧಿ ಸಂಗ್ರಹಿಸುವ ಹಾಗೂ ತುಳಸಿ ಗ್ಯಾಬರ್ಡ್‌ರ ಸಂದೇಶವನ್ನು ಮತದಾರರಿಗೆ ತಲುಪಿಸುವ ನಮ್ಮ ಕೆಲಸದಲ್ಲಿ ಅಡಚಣೆ ಉಂಟು ಮಾಡಿತ್ತು ಎಂಬುದಾಗಿ ಅವರ ಪರವಾ ಪ್ರಚಾರ ನಡೆಸುತ್ತಿರುವ ತುಳಸಿ ನೌ ಇಂಕ್ ಹೇಳಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.