ವಾಗ್ದಾನಗಳನ್ನು ಈಡೇರಿಸುವ ಸಮಯ; ಪಾಕಿಸ್ತಾನಕ್ಕೆ ನೆನಪು ಮಾಡಿದ ಅಮೆರಿಕ

ವಾಶಿಂಗ್ಟನ್, ಜು. 26: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಪ್ರವಾಸದ ವೇಳೆ ಮಾಡಿರುವ ವಾಗ್ದಾನಗಳನ್ನು ಈಡೇರಿಸುವ ಸಮಯ ಬಂದಿದೆ ಎಂದು ಅಮೆರಿಕ ಗುರುವಾರ ಹೇಳಿದೆ.
ಈ ವಾರದ ಆದಿ ಭಾಗದಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ವೇಳೆ, ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊರನ್ನು ಭೇಟಿ ಮಾಡಿದ್ದರು.
‘‘ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ. ಅದು ಅತ್ಯಂತ ಮಹತ್ವದ ಹೆಜ್ಜೆ ಎಂಬುದಾಗಿ ನಾವು ಭಾವಿಸುತ್ತೇವೆ. ಇಮ್ರಾನ್ ಖಾನ್ ಟ್ರಂಪ್ ಮತ್ತು ಪಾಂಪಿಯೊರನ್ನು ಭೇಟಿಯಾದ ವೇಳೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಈಗ ಆ ಮಾತುಕತೆಗಳ ವೇಳೆ ನೀಡಲಾದ ಭರವಸೆಗಳನ್ನು ಈಡೇರಿಸುವ ಸಮಯ ಬಂದಿದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಮೋರ್ಗನ್ ಒರ್ಟಾಗಸ್ ಹೇಳಿದರು.
ಟ್ರಂಪ್ ಮತ್ತು ಪಾಂಪಿಯೊ ಜೊತೆ ಇಮ್ರಾನ್ ಖಾನ್ ನಡೆಸಿದ ಮಾತುಕತೆಗಳು ‘ಆರಂಭಿಕ ಮಾತುಕತೆಗಳು’ ಎಂದು ಬಣ್ಣಿಸಿದ ಅವರು, ಇದು ಪಾಕಿಸ್ತಾನದ ಪ್ರಧಾನಿಯನ್ನು ವೈಯಕ್ತಿಕವಾಗಿ ಭೇಟಿಯಾಗುವ ಹಾಗೂ ವೈಯಕ್ತಿಕ ಸಂಪರ್ಕ ಮತ್ತು ಸಂಬಂಧ ಹೊಂದುವ ಅವಕಾಶವೊಂದನ್ನು ಅಧ್ಯಕ್ಷ ಮತ್ತು ವಿದೇಶಾಂಗ ಕಾರ್ಯದರ್ಶಿಗೆ ಒದಗಿಸಿತು ಎಂದು ನುಡಿದರು.
‘‘ಈ ಮೊದಲ ಸಭೆಯ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಸಮಯ ಬಂದಿದೆ ಎಂಬುದಾಗಿ ನಾವು ಈಗ ಭಾವಿಸಿದ್ದೇವೆ. ಅಫ್ಘಾನಿಸ್ತಾನ ಸರಕಾರದೊಂದಿಗೆ ಸಂಧಾನ ನಡೆಸುವಂತೆ ತಾಲಿಬಾನನ್ನು ಒತ್ತಾಯಿಸುವುದಾಗಿ ನಾನು ಪಣ ತೊಟ್ಟಿದ್ದೇನೆ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಹೇಳಿರುವುದನ್ನು ನಾನಿಲ್ಲಿ ಪ್ರಸ್ತಾಪಿಸಲು ಇಷ್ಟಪಡುತ್ತೇನೆ’’ ಎಂದರು.







