ಆನೆ ದಂತ ಮಾರಾಟ ಆರೋಪ: ಮೂವರ ಬಂಧನ

ಬೆಂಗಳೂರು, ಜು.26: ಆನೆ ದಂತ ಮಾರಾಟ ಆರೋಪದಡಿ ಮೂವರನ್ನು ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಮರಳವಾಡಿಯ ನಾಗರಾಜ್ ನಾಯಕ (42), ಹಾರೋಬೆಲೆಯ ವಸಂತ (35) ಹಾಗೂ ಜಿಗಣಿಯ ನಾಗರಾಜ (33) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ನಾಗರಾಜ್ ಹಾಗೂ ಜಿಗಣಿ ನಾಗರಾಜ ನಗರದ ಎಫ್‌ಟಿಐ ವೃತ್ತದ ಬಳಿ ಗೋಣಿಚೀಲದಲ್ಲಿ ಆನೆ ದಂತಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪೈಕಿ ಒಬ್ಬನಾದ ಹಾರೋಬೆಲೆಯ ನಿಡ್ಗಲ್ ವಸಂತ, ತಮಗೆ ಆನೆದಂತವನ್ನು ಮಾರಾಟ ಮಾಡಲು ನೀಡಿದ್ದಾನೆಂದು ತಿಳಿಸಿದ ಮಾಹಿತಿಯಾಧರಿಸಿ ಆತನನ್ನೂ ಬಂಧಿಸಲಾಗಿದೆ.
ನಾಗರಹೊಳೆಯ ಬಳಿ ಮೃತಪಟ್ಟಿದ್ದ ಆನೆಯ ದಂತಗಳನ್ನು ಕತ್ತರಿಸಿಕೊಂಡು ಬಂದು ಮಾರಾಟ ಮಾಡಲು ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ 2 ಆನೆ ದಂತಗಳನ್ನು ಜಪ್ತಿ ಮಾಡಿ, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.