ಅನ್ಯಾಯವಾಗಿ 23 ವರ್ಷ ಜೈಲಿನಲ್ಲಿದ್ದ ಭಟ್‌ಗೆ ಸ್ವಗ್ರಾಮದಲ್ಲಿ ಸ್ವಾಗತಿಸಿದ್ದು ಹೆತ್ತವರ ಗೋರಿಗಳು

ಶೀನಗರ,ಜು.26: ದಿಲ್ಲಿ ಮತ್ತು ರಾಜಸ್ಥಾನದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟು ಭಯೋತ್ಪಾದಕನೆಂಬ ಹಣೆಪಟ್ಟಿಯೊಂದಿಗೆ ಅನ್ಯಾಯವಾಗಿ 23 ವರ್ಷಗಳ ಕಾಲ ಜೈಲುಗಳಲ್ಲಿ ಕೊಳೆಯುತ್ತಿದ್ದ ಅಲಿ ಮುಹಮ್ಮದ್ ಭಟ್(48) ಕೊನೆಗೂ ಆರೋಪ ಮುಕ್ತನಾಗಿ ಗುರುವಾರ ಶ್ರೀನಗರ ಬಳಿಯ ತನ್ನ ಮನೆಗೆ ಮರಳಿದಾಗ ಆತನನ್ನು ಸ್ವಾಗತಿಸಿದ್ದು ಹೆತ್ತವರ ಗೋರಿಗಳು. ತಾನೆಂದೂ ಮಾಡಿರದ ಅಪರಾಧಕ್ಕಾಗಿ ಭಟ್ ಜೈಲಿನಲ್ಲಿ ಕೊಳೆಯುತ್ತಿದ್ದಾಗ ಇತ್ತ ದುಃಖದ ಭಾರ ತಡೆಯಲಾಗದೇ ಹೆತ್ತವರು ಮೃತಪಟ್ಟಿದ್ದರು.
1996ರ ರಾಜಸ್ತಾನದ ಸಮಲೇಟಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಟ್ ಸೇರಿದಂತೆ ಆರು ಜನರನ್ನು ರಾಜಸ್ಥಾನ ಉಚ್ಚ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿತ್ತು. ಮಂಗಳವಾರ ಸಂಜೆ ಜೈಲಿನಿಂದ ಭಟ್ ಬಿಡುಗಡೆಗೊಂಡಿದ್ದ. ಸಮಲೇಟಿ ಸ್ಫೋಟಕ್ಕಿಂತ ಒಂದು ದಿನ ಮೊದಲು ದಿಲ್ಲಿಯ ಲಜಪತ್ ನಗರದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಭಟ್ ಆರೋಪಿಯಾಗಿದ್ದರೂ ದಿಲ್ಲಿ ಉಚ್ಚ ನ್ಯಾಯಾಲಯವು ಏಳು ವರ್ಷಗಳ ಹಿಂದೆಯೇ ಖುಲಾಸೆಗೊಳಿಸಿತ್ತು.
ಗುರುವಾರ ಮನೆಗೆ ಮರಳಿದ ಭಟ್ ತನ್ನ ತಂದೆ-ತಾಯಿಯ ಗೋರಿಗಳ ಮೇಲೆ ರೋದಿಸುತ್ತ ಹೊರಳಾಡುತ್ತಿದ್ದ ವೀಡಿಯೊ ಸಾಮಾಜಕ ಮಾಧ್ಯಮಗಳಲ್ಲ್ಲಿ ವೈರಲ್ ಆಗಿದೆ.
ನಾನು ಈ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟಾಗ ನಮ್ಮನ್ನು ದಮನಿಸಲಾಗುತ್ತಿದೆ ಎನ್ನುವುದು ನನಗೆ ಅರ್ಥವಾಗಿತ್ತು ಮತ್ತು ಇದು ಸರಿಯಲ್ಲ.ನೀವು ಬಲಿಪಶುವಾಗಬಹುದು,ಆದರೆ ಎಂದೂ ದಮನಿತರಾಗಬಾರದು ಎಂದು ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತ ಹೇಳಿದ ಭಟ್,ನಾನು ಜೈಲಿನಲ್ಲಿಯೇ ಕೊನೆಯುಸಿರೆಳೆಯುತ್ತೇನೆ ಎಂದು ಭಾವಿಸಿದ್ದೆ. ನ್ಯಾಯಾಲಯ ಕೊನೆಗೂ ನನ್ನನ್ನು ಅಮಾಯಕನೆಂದು ಘೋಷಿಸಿದೆ ಎಂದ.
ಲಜಪತ್ ನಗರದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 13 ಜನರು ಸಾವನ್ನಪಿದ್ದರೆ ಸಮಲೇಟಿ ಸ್ಫೋಟದಲ್ಲಿ 14 ಜನರು ಮೃತರಾಗಿದ್ದರು. ನೇಪಾಳದಲ್ಲಿ ತನ್ನ ಪಾಡಿಗೆ ತಾನು ಕಾರ್ಪೆಟ್‌ಗಳನ್ನು ಮಾರಾಟ ಮಾಡಿಕೊಂಡಿದ್ದ ಭಟ್‌ನನ್ನು ಬಂಧಿಸಿದ್ದ ಪೊಲೀಸರು ಎರಡೂ ಪ್ರಕರಣಗಳಲ್ಲಿ ಆತನನ್ನು ಆರೋಪಿಯಾಗಿಸಿದ್ದರು.ಆತ ತಪ್ಪಿತಸ್ಥ ಎಂದು ಘೋಷಿಸಿದ್ದ ನ್ಯಾಯಾಲಯಗಳು ಒಂದು ಪ್ರಕರಣದಲ್ಲಿ ಮರಣ ದಂಡನೆ ಮತ್ತು ಇನ್ನೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದವು. ಆದರೆ ಉಚ್ಚ ನ್ಯಾಯಾಲಯಗಳಲ್ಲಿ ಮೇಲ್ಮನವಿ ವಿಚಾರಣೆ ಸಂದರ್ಭ ಎರಡೂ ಪ್ರಕರಣಗಳಲ್ಲಿ ತನ್ನ ವಿರುದ್ಧ ಸಾಕ್ಷಾಧಾರಗಳನ್ನು ಒದಗಿಸುವಲ್ಲಿ ಪೊಲೀಸರು ವಿಫಲಗೊಂಡಿದ್ದರಿಂದ ಭಟ್ ಖುಲಾಸೆಗೊಂಡಿದ್ದಾನೆ.
ಬಂಧಿಸಲ್ಪಟ್ಟಾಗ 26ರ ಯುವಕನಾಗಿದ್ದ ಭಟ್ ತನ್ನ ಅಮೂಲ್ಯ 23 ವರ್ಷಗಳನ್ನು ಅನ್ಯಾಯವಾಗಿ ಕಳೆದುಕೊಂಡಿದ್ದಾನೆ. ತನ್ನವರೆನ್ನುವ ಎಲ್ಲರನ್ನೂ ಆತ ಕಳೆದುಕೊಂಡಿದ್ದಾನೆ. ಆತನ ಊರಿನಲ್ಲಿ ಎಲ್ಲವೂ ಬದಲಾಗಿದೆ.
ಈಗ ಹೊಸದಾಗಿ ಜೀವನವನ್ನು ಆರಂಭಿಸುವ ಸವಾಲು ಭಟ್ ಮುಂದಿದೆ. ಆದರೆ ಆತ ಅನ್ಯಾಯವಾಗಿ ಜೀವನದ 23 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರ ಹೊಣೆಯನ್ನು ಹೊತ್ತುಕೊಳ್ಳುವವರಾರು?







