ಹುಟ್ಟೂರು ಬೂಕನಕೆರೆಗೆ ಸಿಎಂ ಯಡಿಯೂರಪ್ಪ ಭೇಟಿ
ಮಂಡ್ಯ, ಜು.27: ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಶನಿವಾರ ಬೆಳಗ್ಗೆ ತನ್ನ ತವರು ಜಿಲ್ಲೆಯ ಬೂಕನಕೆರೆ ಗ್ರಾಮಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಂಡ್ಯದ ಹೊರವಲಯದ ತೂಬಿನಕೆರೆ ಹೆಲಿಪ್ಯಾಡ್ಗೆ ಹೆಲಿಕಾಫ್ಟರ್ ನಲ್ಲಿ ಬಂದಿಳಿದ ಯಡಿಯೂರಪ್ಪ, ಅಲ್ಲಿಂದ ರಸ್ತೆಮಾರ್ಗದ ಮೂಲಕ ತನ್ನ ಹುಟ್ಟೂರು ಕೆ.ಆರ್.ಪೇಟೆಯ ಬೂಕನಕೆರೆ ಗ್ರಾಮಕ್ಕೆ ತೆರಳಿದರು.
ತವರಿಗೆ ಆಗಮಿಸಿದ ಮುಖ್ಯಮಂತ್ರಿ ಅವರಿಗೆ ಗ್ರಾಮದಲ್ಲಿ ಪೂರ್ಣಕುಂಭ ಸ್ವಾಗತ ದೊರೆಯಿತು. ಗ್ರಾಮದ ಗವಿಮಠದ ಸಿದ್ದಲಿಂಗೇಶ್ವರ ಮಠದ ಚನ್ನವೀರ ಸ್ವಾಮೀಜಿ, ಬೇಬಿ ಮಠದ ಸ್ವಾಮೀಜಿ ಅವರೂ ಸ್ವಾಗತ ಕೋರಿದರು.
ಗ್ರಾಮದ ಗವಿಮಠ ಮತ್ತು ಮನೆ ದೇವತೆ ಆದಿಶಕ್ತಿ ಗೋಗಲಮ್ಮನಿಗೆ ಪೂಜೆ ಸಲ್ಲಿಸಿದ ಅವರು, ನಂತರ ಗ್ರಾಮದ ಅಣ್ಣನ ಮನೆಗೆ ಭೇಟಿ ನೀಡಿ ಬಂಧುಗಳ ಕುಶಲೋಪರಿ ವಿಚಾರಿಸಿದರು. ನಂತರ, ಮೇಲುಕೋಟೆಗೆ ತೆರಳಿ ಶ್ರೀ ಚಲುವನಾರಾಯಣ ಸ್ವಾಮಿ ದೇವರ ದರ್ಶನ ಪಡೆದರು.
ನೂರಕ್ಕೆ ನೂರು ಬಹುಮತ ಸಾಬೀತು:
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಮವಾರ ನೂರಕ್ಕೆ ನೂರು ಬಹುಮತ ಸಾಬೀತು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಸಚಿವರ ಸಂಪುಟ ವಿಸ್ತರಣೆ ಮಾಹಿತಿ ನೀಡಲು ನಿರಾಕರಿಸಿದರು. ಮೇಲುಕೋಟೆ ಪುರಾಣ ಪ್ರಸಿದ್ದ ಪ್ರಮುಖ ಪ್ರವಾಸಿ ತಾಣ. ನೂರಾರು ಭಕ್ತರು, ಪ್ರವಾಸಿಗರು ಬರುತ್ತಾರೆ. ಇಲ್ಲಿ ದಾಸೋಹ ಭವನದ ಕೊರತೆ ಇದೆ. ಆದಷ್ಟು ಬೇಗ ದಾಸೋಹ ಭವನ ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ಅಧಿಕಾರ ಸ್ವೀಕರಿಸಿದ ತಕ್ಷಣ ಹುಟ್ಟೂರು ಬೂಕನಕೆರೆಗೆ ಭೇಟಿ ಕೊಡುತ್ತಿರುವುದು ಅತ್ಯಂತ ಸಂತಸದ ವಿಚಾರ. ಊರು ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನಹರಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರು ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ನಿಟ್ಟಿನಲ್ಲಿ ಒಳ್ಳೆಯ ನಿರ್ಧಾರ ಮಾಡಲಿ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಪುತ್ರ, ಸಂಸದ ರಾಘವೇಂದ್ರ, ಬಿಜೆಪಿಯ ಇತರ ಮುಖಂಡರು ಹಾಜರಿದ್ದರು.