ದ್ವಿತೀಯ ಮಹಾತ್ಮ ಅಬ್ದುಲ್ ಕಲಾಂ: ಪ್ರೊ. ಚಂದ್ರಶೇಖರ್ ಶೆಟ್ಟಿ
ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಜು. 27: ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರವನ್ನು ದೊರಕಿಸಿಕೊಡುವಲ್ಲಿ ಶ್ರಮಿಸಿದ ಮಹಾತ್ಮಗಾಂಧಿಯನ್ನು ನಾವೆಲ್ಲಾ ನೋಡದಿರಬಹುದು. ಆದರೆ ಕ್ಷಿಪಣಿ ಮನುಷ್ಯನೆಂದು ಗುರುತಿಸಲ್ಪಟ್ಟ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ನಮ್ಮ ಪಾಲಿನ ದ್ವಿತೀಯ ಮಹಾತ್ಮ ಎಂದು ಸಂತ ಅಲೋಶಿಯಸ್ ಕಾಲೇಜಿನ ಭೌತಶಾಸ್ತ್ರದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರ ಶೇಖರ ಶೆಟ್ಟಿ ಟಿ. ಅಭಿಪ್ರಾಯಿಸಿದ್ದಾರೆ.
ಅವರು ಇಂದು ರಥಬೀದಿಯ ಡಾ. ಪಿ. ದಯಾನಂದ ಪೈ - ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದ ಸಹಕಾರದಲ್ಲಿ ಅಬ್ದುಲ್ ಕಲಾಂ ಮತ್ತು ಆಧುನಿಕ ಭಾರತ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅವರೊಬ್ಬ ಮಹಾತ್ಮ ಮಾತ್ರವಲ್ಲ, ಸರಳ ವ್ಯಕ್ತಿತ್ವದ ಆದರ್ಶ ಪುರುಷ. ಅವರು ಬಡತನದಲ್ಲಿದ್ದರೂ ಎಂದೂ ಬಡತನವನ್ನು ಶಪಿಸಲಿಲ್ಲ. ಆದರೆ ಕನಸು ಕಾಣವುದನ್ನು ಬಿಡಲಿಲ್ಲ. ಅವರು ಹೋದಲ್ಲೆಲ್ಲಾ ವಿದ್ಯಾರ್ಥಿಗಳಿಗೂ ಕಸು ಕಾಣಲು ಪ್ರೇರೇಪಿಸುತ್ತಿದ್ದರು. ಭಾರತ ರತ್ನ ಪ್ರಶಸ್ತಿಯೊಂದಿಗೆ 48 ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪಡೆದ ಮೇಧಾವಿ ಅಬ್ದುಲ್ ಕಲಾಂ. ಅವರು ತೋರಿಸಿದ ಮಾರ್ಗದಲ್ಲಿ ಇಂದಿನ ಯುವ ವಿದ್ಯಾರ್ಥಿ ವಿಜ್ಞಾನಿಗಳು ಸಾಗಬೇಕು ಎಂದು ಸೇರಿದ್ದ ವಿದ್ಯಾರ್ಥಿಗಳಿಗೆ ಪ್ರೊ. ಚಂದ್ರಶೇಖರ್ ಕರೆ ನೀಡಿದರು.
ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರೊಯ್ ಕ್ಯಾಸ್ತಲಿನೊ ಮಾತನಾಡಿ, ಭಾರತವಿಂದು ಅಮೆರಿಕ ಹಾಗೂ ಚೀನಾಕ್ಕೆ ಸಮಾನವಾಗಿ ಬೆಳೆಯುವಲ್ಲಿ ವಿಜ್ಞಾನಿಗಳ ಪಾತ್ರ ಮಹತ್ತರವಾದುದು. ಅಂತಹ ಸಂದರ್ಭ ಡಾ. ಅಬ್ದುಲ್ ಕಲಾಂರ ಆದರ್ಶಗಳನ್ನು ಪಾಲಿಸಿಕೊಂಡು ಇಂದಿನ ಯುವ ವಿದ್ಯಾರ್ಥಿಗಳು ಬೆಳೆಯಬೇಕಾಗಿದೆ ಎಂದರು.
ವೇದಿಕೆಯಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೋ, ಕಾಲೇಜಿನ ಉಪನ್ಯಾಸಕಿ ಕೃಷ್ಣಪ್ರಭಾ ಉಪಸ್ಥಿತರಿದ್ದರು.
ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸುಧಾಕರನ್ ವಂದಿಸಿದರು.







