ಬಸವ ಧರ್ಮ ವೈದಿಕ ವ್ಯವಸ್ಥೆಗೆ ಪರ್ಯಾಯವಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜು.27: ಬಸವ ಧರ್ಮ ಸ್ವತಂತ್ರ ಧರ್ಮವಾಗಿದ್ದು, ವೈದಿಕ ವ್ಯವಸ್ಥೆಗೆ ಪರ್ಯಾಯ ಧರ್ಮ ಎಂಬುದರಲ್ಲಿ ಯಾವುದೆ ಅನುಮಾನ ಬೇಡವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ಶನಿವಾರ ಸಪ್ನ ಬುಕ್ ಹೌಸ್ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯರವರ ‘ಲಿಂಗಾಯತ ಕನ್ನಡ ವಚನ ಧರ್ಮ’ ಹಾಗೂ ‘ವಚನ ಧರ್ಮ ಅರಿವಿನ ಬೆರಗು’ ಕುರಿತು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಬಸವಾದಿ ಶರಣರು ಪ್ರಜಾಪ್ರಭುತ್ವದ ಬೀಜವನ್ನು ನೆಟ್ಟವರು. ಅಲ್ಲಿಯವರೆಗೂ ಇದರ ಪರಿಕಲ್ಪನೆಯೇ ಇರಲಿಲ್ಲ. ಶರಣ ಸಮುದಾಯವು ವೈದಿಕ ವ್ಯವಸ್ಥೆಗೆ ಪರ್ಯಾಯವಾಗಿ ಹೊಸ ಧರ್ಮವನ್ನು ಹುಟ್ಟು ಹಾಕುವ ಪ್ರಯತ್ನ ಅಂದೇ ನಡೆಸಿದರು. ಅವರ ದಾರಿಯಲ್ಲಿ ಮಾನವೀಯ ಮೌಲ್ಯವುಳ್ಳ ಪ್ರತಿಯೊಬ್ಬರು ಸಾಗಬೇಕಾಗಿದೆ ಎಂದು ಅವರು ಆಶಿಸಿದರು.
ಬಸವಣ್ಣ ಇನ್ನಷ್ಟು ಕಾಲ ಬದುಕಬೇಕಾಗಿತ್ತು. ಆದರೆ, ಸಮಾಜ ಸುಧಾರಕರು ಹೆಚ್ಚು ಕಾಲ ಬದುಕುವುದಿಲ್ಲ. ಬಸವಣ್ಣನವರು ಇನ್ನಷ್ಟು ಕಾಲ ಬದುಕಿದ್ದರೆ ಸಮಾಜಕ್ಕೆ ಕನ್ನಡ ನಾಡಿಗೆ ಇನ್ನಷ್ಟು ಕೊಡುಗೆ ನೀಡುತ್ತಿದ್ದರು. ನಾನು ಮುಖ್ಯಮಂತ್ರಿಯಾಗುತ್ತಿದ್ದಂತೆ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರಮಾಣ ವಚನ ಸ್ವೀಕರಿಸಿದ್ದು ತೋರಿಕೆಗೆ ಅಲ್ಲ. ಆದರೆ, ಇದನ್ನೇ ಕೆಲವರು ಟೀಕೆ ಮಾಡಿದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಚ್.ಎಂ.ಜಾಮದಾರ್ ಮಾತನಾಡಿ, ಲಿಂಗಾಯತ ಧರ್ಮ ವಿಷಯದಲ್ಲಿ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಪೇಜಾವರ ಮಠಾಧೀಶರು ನನ್ನ ಚರ್ಚೆಗೆ ಆಹ್ವಾನಿಸಿದ್ದಾರೆ. ಆದರೆ, ನಾನು ಚರ್ಚೆಗೆ ಹೋಗುವುದಿಲ್ಲ. ಪೇಜಾವರ ಮಠಾಧೀಶರು ತಮ್ಮಲ್ಲಿರುವ ಗೊಂದಲ ಪರಿಹರಿಸಿಕೊಳ್ಳಲು ಇಂದು ಬಿಡುಗಡೆಯಾದ ಪುಸ್ತಕವನ್ನೇ ಕಳುಹಿಸಿ ಕೊಡುತ್ತೇನೆಂದು ತಿಳಿಸಿದರು. ಬಸವಧರ್ಮವನ್ನು ಟೀಕೆ ಮಾಡುತ್ತಿರುವ ಪೇಜಾವರ ಶ್ರೀಗಳ ಕಾಲಿಗೆ ಬಿದ್ದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವ ಧರ್ಮವನ್ನೇ ನಿರ್ನಾಮ ಮಾಡಲು ಹೊರಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ವಿಮರ್ಶಕಿ ಎಂ.ಎಸ್.ಆಶಾದೇವಿ, ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಸವರಾಜ ಸಾದರ ಮತ್ತಿತರರಿದ್ದರು. ಬಾಕ್ಸ್
ನಾನು ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಲಿಂಗಾಯತ ಧರ್ಮ ಎಂದು ಒಂದು ಗುಂಪು ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ರಚನೆಗೆ ಮತ್ತೊಂದು ಗುಂಪು ನನಗೆ ಮನವಿ ಸಲ್ಲಿಸಿತು. ಇದಕ್ಕಾಗಿ ನ್ಯಾ.ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ಪಡೆದುಕೊಳ್ಳಲಾಯಿತು. ನಂತರ ಲಿಂಗಾಯತ ಧರ್ಮ ಎಂದು ಮಾನ್ಯತೆಗಾಗಿ ಕೇಂದ್ರಕ್ಕೆ ಕಳುಹಿಸಿ ಕೊಡಲಾಯಿತು. ಇದಕ್ಕಾಗಿ ಕೆಲವರು ನನ್ನನ್ನೇ ಖಳನಾಯಕನನ್ನಾಗಿ ಬಿಂಬಿಸಿದರು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ







