100 ಕೋಟಿ ರೂ. ಸಾಲ ಮನ್ನಾ ನಿರ್ಧಾರ: ಬಿಎಸ್‌ವೈಗೆ ನೇಕಾರರ ಜಾಗೃತಿ ವೇದಿಕೆ ಅಭಿನಂದನೆ

ಬೆಂಗಳೂರು, ಜು.27: ಸಂಕಷ್ಟಕ್ಕೆ ಸಿಲುಕಿರುವ ನೇಕಾರರ ನೆರವಿಗೆ ಧಾವಿಸಿ 100 ಕೋಟಿ ರೂ. ಸಾಲ ಮನ್ನಾ ಮಡುವ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೇಕಾರರ ಜಾಗೃತಿ ವೇದಿಕೆ ಅಭಿನಂದನೆ ಸಲ್ಲಿಸಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸಚಿವ ಸಂಪುಟದಲ್ಲಿಯೇ, ನೇಕಾರರ ಸಾಲಮನ್ನಾ ಮಾಡುವ ಕುರಿತು ದಿಟ್ಟ ನಿರ್ಧಾರ ಕೈಗೊಂಡ ಬಿ.ಎಸ್.ಯಡಿಯೂರಪ್ಪ ನೇಕಾರರ ಪಾಲಿಗೆ ಆಶಾಕಿರಣರಾಗಿದ್ದಾರೆಂದು ವೇದಿಕೆಯ ಅಧ್ಯಕ್ಷ ಲಿಂಗಾರಾಜು ಡಿ.ನೊಣವಿನಕೆರೆ ಮೆಚ್ಚುಗೆ ವ್ಯಕ್ತಪಡಿಸಿದರು.
2019ರ ಮಾರ್ಚ್ ಅಂತ್ಯಕ್ಕೆ ಅನ್ವಯವಾಗುವಂತೆ ನೇಕಾರರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದು, ಅದೇ ಮಾದರಿಯಲ್ಲಿ ಮೀನುಗಾರರು ಮತ್ತು ಕೃಷಿ ಕಾರ್ಮಿಕರ ಸಂಕಷ್ಟಕ್ಕೂ ಸ್ಪಂದಿಸುವುದಾಗಿ ಹೇಳಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಕಳೆದ 14 ತಿಂಗಳಿನಿಂದ ಮೈತ್ರಿ ಸರಕಾರದ ಅವಧಿಯಲ್ಲಿ ಜವಳಿ ಖಾತೆಯನ್ನು ಕುಮಾರಸ್ವಾಮಿ ತಮ್ಮ ಬಳಿಯೇ ಇರಿಸಿಕೊಂಡು ನೇಕಾರರ ಏಳ್ಗೆಗೆ ಯಾವುದೇ ಸಭೆಗಳನ್ನು ಮಾಡದೆ ಕಡೆಗಣಿಸಿದ್ದಾರೆ. ಹೀಗಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಜವಳಿ ಖಾತೆಯನ್ನು ಸಮರ್ಥರೊಬ್ಬರಿಗೆ ನೀಡಿ ಮೂಲೆಗುಂಪಾಗುತ್ತಿರುವ ನೇಕಾರಿಕೆಗೆ ಕಾಯಕಲ್ಪ ನೀಡಬೇಕೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.