ಬಿಜೆಪಿ ಸರಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡುತ್ತೇವೆ: ಎಚ್.ಡಿ.ದೇವೇಗೌಡ
"ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ"

ಬೆಂಗಳೂರು, ಜು.27: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಎಷ್ಟು ನೋವು ತಿಂದಿದ್ದಾರೆ. ಇದೇ ಜೆ.ಪಿ.ಭವನದಲ್ಲಿ 15 ನಿಮಿಷ ಕಣ್ಣೀರು ಹಾಕಿದ್ದಾರೆ. ಈ ಎಲ್ಲ ವಿಚಾರಗಳು ನನಗೆ ಗೊತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ಶನಿವಾರ ನಗರದ ಜೆಡಿಎಸ್ ಕಚೇರಿ(ಜೆಪಿ ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಕಳೆದುಕೊಂಡಿದ್ದೇವೆ, ಏನು ಮಾಡಲು ಸಾಧ್ಯವಿಲ್ಲ. ಸರಕಾರ ಹೋದರೂ ನಮಗೆ ತೊಂದರೆ ಇಲ್ಲ. ಈ ಪಕ್ಷವನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಯಡಿಯೂರಪ್ಪಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ. ಯಾವುದೇ ದ್ವೇಷ ಇಲ್ಲದೆ ಕೆಲಸ ಮಾಡುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಅವರು ಉತ್ತಮವಾದ ತೀರ್ಮಾನ ಮಾಡಿದ್ದಾರೆ ಎಂದು ಅವರು ಹೇಳಿದರು.
ರಾಜ್ಯಕ್ಕೆ ಒಳ್ಳೆಯದು ಮಾಡಿದರೆ ನಮ್ಮ ಸಹಕಾರ ಇರುತ್ತದೆ. ಪರಿಣಾಮಕಾರಿಯಾಗಿ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡಲು ಸೂಚನೆ ನೀಡಿದ್ದೇನೆ. ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸುವ ಬಗ್ಗೆ ಈಗಲೇ ಚರ್ಚೆ ಯಾಕೆ, ಮುಂದೆ ನೋಡೋಣ ಎಂದು ದೇವೇಗೌಡ ತಿಳಿಸಿದರು. ನಿನ್ನೆ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾಜಿ ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆ ಕುರಿತು ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆವರು, ನಾವು ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ ಎಂದರು.
ಹಣಕಾಸು ಮಸೂದೆ ವಿಧಾನಮಂಡಲದಲ್ಲಿ ಅಂಗೀಕಾರ ಪಡೆಯಲಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್ ಅದು. 14 ತಿಂಗಳಿಗೆ ಮನೆಗೆ ಹೋಗಬೇಕಲ್ಲ ಎಂಬ ನೋವು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೂ ಇದೆ. ಹೀಗಾಗಿ ಜಿ.ಟಿ.ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ತಮ್ಮ ಅಭಿಪ್ರಾಯ ಹೇಳಿಕೊಳ್ಳುವಷ್ಟು ಹಕ್ಕು ಇಲ್ಲವೇ? ಅವರ ಹೇಳಿಕೆಯನ್ನು ಅಷ್ಟೊಂದು ದೊಡ್ಡದಾಗಿ ಪ್ರಚಾರ ಮಾಡುವ ಅಗತ್ಯವಿಲ್ಲ ಎಂದ ಅವರು, ಎಲ್ಲಾ ವಿಷಯಗಳಿಗೂ ಸುಮ್ಮನೆ ನಾವು ವಿರೋಧ ಮಾಡುವುದಿಲ್ಲ. ಹಣಕಾಸು ಮಸೂದೆಯನ್ನು ಎಲ್ಲರೂ ಸರ್ವಾನುಮತದಿಮದ ಒಪ್ಪಿದರೆ ನಮ್ಮ ಬೆಂಬಲವೂ ಇರುತ್ತದೆ. ಪ್ರಾದೇಶಿಕ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ. ಕುಮಾರಸ್ವಾಮಿಯ ತಂದೆಯಾಗಿ ನಾನು ಹೇಳುತ್ತಿದ್ದೇನೆ, ವಿಷಯಾಧಾರಿತವಾಗಿ ನಾವು ಸರಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.
ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್ ಎರಡನೇ ವಾರದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತೆಯರ ಸಮಾವೇಶವನ್ನು ಮಾಡಲಾಗುವುದು. ಆಗಸ್ಟ್ 7ರಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಮಾಡುತ್ತೇನೆ. ರಾಜ್ಯದ 30 ಜಿಲ್ಲೆಗಳಲ್ಲೂ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ಅವರು ಹೇಳಿದರು. ಈ ಪಕ್ಷವನ್ನು ಉಳಿಸಲು ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಕುಮಾರಸ್ವಾಮಿ ನಾಯಕತ್ವ ಮೆಚ್ಚಿ ಶೇ.20ರಷ್ಟು ಜನ ಮತಕೊಟ್ಟಿರುವ ಮತದಾರರು ಇದ್ದಾರೆ. ಯಾರು ಏನೇ ಮಾಡಿದರೂ ಈ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ದೇವೇಗೌಡ ತಿಳಿಸಿದರು.
ಬೆಂಗಳೂರು ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ಕರೆದಿದ್ದೇವೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಗೋಪಾಲಯ್ಯ ನಮ್ಮ ಮೇಲೆ ಅನೇಕ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹೇಳಿಕೆಗಳನ್ನು ನೀಡಿ ಮುಂಬೈಗೆ ಹೋಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಶಾಸಕರ ರಾಜೀನಾಮೆ ಪ್ರಕರಣದ ಕುರಿತು ಈ ವಾರದಲ್ಲಿ ತೀರ್ಮಾನ ಕೊಡುವುದಾಗಿ ತಿಳಿಸಿದ್ದಾರೆ. ಆನಂತರ ಚುನಾವಣೆ ಎದುರಾಗುತ್ತದೋ ಇಲ್ಲವೋ ಗೊತ್ತಿಲ್ಲ. ನಾನು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ದಿನದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದು ದೇವೇಗೌಡ ಹೇಳಿದರು.







