'ಶಿಕ್ಷಕರ ಅರ್ಪಿತಾ ಮನೋಭಾವದಿಂದ ವಿಶೇಷ ಮಕ್ಕಳ ಸೇವೆ ಸಾಧ್ಯ'
ವಿಶೇಷ ಶಿಕ್ಷಕರ ರಾಜ್ಯ ಸಮಾವೇಶದಲ್ಲಿ ಫಾ.ಮ್ಯಾಥ್ಯು ವಾಝ್

ಉಡುಪಿ, ಜು.27: ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ವೃತ್ತಿ ಯಲ್ಲ. ಅದು ದೇವರು ನಮಗೆ ನೀಡಿರುವ ಅವಕಾಶ ಆಗಿದೆ. ಅರ್ಪಿತ ಹಾಗೂ ಸೇವಾ ಮನೋಭಾವ ಇಲ್ಲದಿದ್ದರೆ ಈ ವಿಶೇಷ ಮಕ್ಕಳ ಕೆಲಸ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಕಿನ್ನಿಗೋಳಿ ಸೈಂಟ್ ಮೇರಿಸ್ ವಿಶೇಷ ಶಾಲೆಯ ಸಂಚಾಲಕ ವಂ.ಫಾ.ಮ್ಯಾಥ್ಯು ವಾಝ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಆಶ್ರಯದಲ್ಲಿ ಶನಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಆಯೋಜಿಸಲಾದ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿಶೇಷ ಮಕ್ಕಳ ಶಾಲೆ ಹಾಗೂ ಶಿಕ್ಷಕರ ಬೇಡಿಕೆಗಳಿಗಾಗಿ ಕಳೆದ 20 ವರ್ಷ ಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೂ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲರೂ ಒಗ್ಗಟ್ಟಾಗಿ ನ್ಯಾಯ ಸಿಗುವವರೆಗೆ ಪ್ರಯತ್ನ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ಮಾತನಾಡಿ, ಬಹಳ ಪ್ರಾಮುಖ್ಯ ವಾದ ಸೇವೆ ಸಲ್ಲಿಸುವ ವಿಶೇಷ ಶಿಕ್ಷಕರಿಗೆ ಸರಕಾರ ಸೌಲಭ್ಯ ಒದಗಿಸುವಲ್ಲಿ ಹಿಂದೇಟು ಹಾಕುತ್ತಿದೆ. ವಿಶೇಷ ಶಿಕ್ಷಕರ ಕೊರತೆಗಳು ಸರಕಾರದ ಕಿವಿಗೆ ಬೀಳುವಂತೆ ಮಾಡಲು ಹೋರಾಟ ಮಾಡಬೇಕು. ವಿಶೇಷ ಶಿಕ್ಷಕರಿಗೆ ಸರಕಾರ ಕನಿಷ್ಠ 20ಸಾವಿರ ರೂ. ವೇತನ ಹಾಗೂ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಕೋಶಾಧಿಕಾರಿ ಕರೆಪ್ಪ ಬಿ.ಎಚ್., ಆಶಾ ನಿಲಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಜಯ ವಿಜಯ ಉಪಸ್ಥಿತರಿದ್ದರು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ವಸಂತ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ರಾಜ್ಯಾಧ್ಯಕ್ಷೆ ಆಗ್ನೇಸ್ ಕುಂದರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷೆ ಕಾಂತಿ ಹರೀಶ್ ಸ್ವಾಗತಿಸಿದರು. ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಗಳ ಮೇಲೆ ಕಾನೂನುಗಳ ಹೇರಿಕೆ
ವಿಶೇಷ ಮಕ್ಕಳ ಶಾಲೆಗಳನ್ನು ಮಕ್ಕಳ ಕಲ್ಯಾಣ ಸಮಿತಿಯ ವ್ಯಾಪ್ತಿಗೆ ತರಲಾಗಿದ್ದು, ಈ ಮೂಲಕ ಹಲವು ರೀತಿಯ ಕಾನೂನುಗಳನ್ನು ಹೇರುವ ಮೂಲಕ ಸಂಸ್ಥೆಗಳಿಗೆ ಸಮಸ್ಯೆ ತಂದೊಡ್ಡಲಾಗುತ್ತಿದೆ ಎಂದು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ವಸಂತ ಕುಮಾರ್ ಶೆಟ್ಟಿ ಆರೋಪಿಸಿದರು.
ವಿಶೇಷ ಶಿಕ್ಷಕರಿಗೆ ಸರಕಾರ ನೀಡುವ ಕಡಿಮೆ ವೇತನದಿಂದಾಗಿ ಈ ಕೆಲಸಕ್ಕೆ ಬರಲು ಯುವ ಜನತೆ ಹಿಂದೇಟು ಹಾಕುತ್ತಿದ್ದಾರೆ. 2016ರ ಅಧಿನಿಯಮದ ಪ್ರಕಾರ ಶಿಕ್ಷಕರಿಗೆ ಪೂರ್ಣ ಪ್ರಮಾಣದ ವ್ಯವಸ್ಥೆ ಆಗಬೇಕು. ಸರಕಾರ ನಮ್ಮ ಸಂಸ್ಥೆಗಳನ್ನು ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧೀನದಲ್ಲೇ ಉಳಿಸಿಕೊಂಡು ಸ್ಪಷ್ಟವಾದ ನೀತಿಯನ್ನು ತರಬೇಕು. ಶಿಕ್ಷಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.







