ಅರಣ್ಯಗಳು ಮಳೆ ನೀರು ಸಂಗ್ರಹಿಸುವ ಉಗ್ರಾಣ: ಕ್ಲಿಫರ್ಡ್ ಲೋಬೊ

ಉಡುಪಿ, ಜು.27: ಕೇವಲ ನಾಲ್ಕು ತಿಂಗಳ ಕಾಲ ಸುರಿಯುವ ಮಳೆಯ ನೀರನ್ನು ಅರಣ್ಯಗಳು ಸಂಗ್ರಹಿಸಿ ವರ್ಷವಿಡೀ ಒದಗಿಸುವ ಕಾರ್ಯ ಮಾಡು ತ್ತವೆ. ಹೀಗೆ ಅರಣ್ಯಗಳು ಮಳೆಯ ನೀರನ್ನು ಸಂಗ್ರಹಿಸುವ ಉಗ್ರಾಣಗಳಾಗಿವೆ. ಆದುದರಿಂದ ಆಮ್ಲಜನಕಕ್ಕಿಂತಲೂ ಮುಖ್ಯವಾಗಿ ನೀರಿನ ಸಂಗ್ರಹಕ್ಕಾಗಿ ನಾವು ಅರಣ್ಯಗಳನ್ನು ರಕ್ಷಿಸಬೇಕಾಗಿದೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ ಒಂದು ಸಾವಿರ ಸಸಿಗಳನ್ನು ನೆಟ್ಟು ಮತ್ತು ಮುಂದಿನ ಐದು ವರ್ಷಗಳ ಕಾಲ ಅವುಗಳನ್ನು ಪೋಷಿಸುವ ಯೋಜನೆ ‘ಕಾಡು ಬೆಳೆಸಿ ನಾಡು ಉಳಿಸಿ’ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.
ಶೇ.30-35ರಷ್ಟು ಮಳೆಯ ನೀರನ್ನು ಅರಣ್ಯಗಳು ಹಿಡಿದಿಟ್ಟುಕೊಳ್ಳುತ್ತವೆ. ಪಶ್ಚಿಮ ಘಟ್ಟಗಳಂತಹ ದಟ್ಟ ಅರಣ್ಯ ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ ನಾಲ್ಕು ಸಾವಿರ ಸೆ.ಮೀ.ನಷ್ಟು ಮಳೆಯಾಗುತ್ತದೆ. ಆದರೂ ಬೇಸಿಗೆ ಯಲ್ಲಿ ಮಾತ್ರ ನಾವು ನೀರಿನ ಕೊರತೆಯನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕಾಗಿದೆ. ಅರಣ್ಯದಷ್ಟೆ ವನ್ಯಜೀವಿಗಳು ಕೂಡ ಬಹಳ ಮುಖ್ಯವಾದುದು. ಇವುಗಳಿಲ್ಲದೆ ನಾವು ಬದುಕುವುದು ಕಷ್ಟ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಪಿಲಿಕುಳದ ಔಷಧಿವನದ ಮೇಲ್ವಿಚಾರಕ ಉದಯಕುಮಾರ್ ಶೆಟ್ಟಿ ಮಾತನಾಡಿ, ಪ್ರತಿಯೊಂದು ಮರವನ್ನು ಕೂಡ ನೂರಾರು ಸಂಖ್ಯೆಯ ಜೀವಿಗಳು ಅವಲಂಬಿಸಿಕೊಂಡಿರು ತ್ತದೆ. ಒಂದು ಮರವನ್ನು ನಾಶ ಮಾಡಿದರೆ ಅದರ ಜೊತೆ ಅದನ್ನು ಅವಲಂಬಿಸಿ ರುವ ಕೀಟ, ಪಕ್ಷಿ, ಪ್ರಾಣಿಗಳ ನಾಶಕ್ಕೂ ನಾವು ಕಾರಣರಾಗುತ್ತೇವೆ. ಆದು ದರಿಂದ ಈ ಭೂಮಿ ಮೇಲೆ ಇರುವ ಪ್ರತಿಯೊಂದು ಮರ ಕೂಡ ಅತ್ಯಂತ ಅಗತ್ಯವಾದುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಪ್ರಜ್ಞೆಯನ್ನು ಬೆಳೆಸಿ ಕೊಳ್ಳಬೇಕು ಎಂದರು.
ಕಾಡು ಬೆಳೆಸುವುದು ನಮ್ಮ ಸಂಸ್ಕೃತಿಯೇ ಹೊರತು ಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ ಗಾರ್ಡನ್ ವ್ಯವಸ್ಥೆ ಅಲ್ಲ. ನಾವು ಗಿಡಗಳನ್ನು ನೆಡುವಾಗ ಪ್ರಾದೇಶಿಕ ಮರಗಳಿಗೆ ಆದ್ಯತೆ ನೀಡಬೇಕು. ಒಂದೇ ಜಾತಿಯ ಗಿಡಗಳನ್ನು ನೆಡುವ ಬದಲು ಬಹುಜಾತಿಯ ಗಿಡಗಳನ್ನು ನೆಡಬೇಕು. ಇದರಿಂದ ಪರಿಸರ ಸಮಾತೋಲನವನ್ನು ಕಾಪಾಡಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿ ದ್ದರು. ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ವಿಶಾಖ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಯೋಜನಾಧಿಕಾರಿ ಚೈತ್ರಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವಥ್ ಸ್ವಾಗತಿಸಿದರು. ಸ್ವಾತಿಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾಲೇಜಿನಿಂದ ಸಿಟಿ ಬಸ್ ನಿಲ್ದಾಣದವರೆಗೆ ಸ್ವಯಂ ಸೇವಕರು ಜಾಥದ ಮೂಲಕ ಮರಗಳ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಿದರು.







