ನಾಗಬನದಿಂದ ಪರಿಸರ ಉಳಿಯುವಿಕೆಗೆ ಕೊಡುಗೆ: ಪಲಿಮಾರುಶ್ರೀ

ಉಡುಪಿ, ಜು.27: ಧಾರ್ಮಿಕ ಹಿನ್ನೆಲೆಯುಳ್ಳ ನಾಗಬನಗಳು ಪರಿಸರ ಉಳಿಯುವಲ್ಲಿ ತಮ್ಮ ಕೊಡುಗೆಯನ್ನು ನೀಡಿವೆ. ನಾಗಬನವನ್ನು ವನವನ್ನಾಗಿಸಿ ಪರಿಸರವನ್ನು ರಕ್ಷಿಸಬೇಕಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಹೇಳಿದ್ದಾರೆ.
ಪರ್ಯಾಯಪಲಿಮಾರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ನಡೆದ ‘ಹಾವು-ನಾವು’ ತುಳು ನಾಡಿನಲ್ಲಿ ನಾಗಾರಾಧನೆಯ ಹಿಂದಿರುವ ಸತ್ಯಾಂಶಗಳು, ಈ ಹಿನ್ನೆಲೆಯಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಚಿಂತನೆಯ ಉಪಯುಕ್ತ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಧರ್ಮ ಹಾಗೂ ವಿಜ್ಞಾನ ಕುರಿತ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಹಾವುಗಳಲ್ಲಿರುವ ವಿವಿಧತೆ ಹಾಗೂ ಅವುಗಳ ಬಗ್ಗೆ ನಮಗಿರುವ ಭಯವನ್ನು ದೂರ ಮಾಡಿ ಅವುಗಳನ್ನು ಸಂರಕ್ಷಿಸುವ ಕುರಿತ ಚಿಂತನೆಗೆ ಈ ಕಾರ್ಯಕ್ರು ವನ್ನು ಆಯೋಜಿಸಲಾಗಿದೆ ಎಂದರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಕೊಳಕಾಡಿ ವಾದಿರಾಜ ಉಪಾಧ್ಯ ಇವರು ಹಾವುಗಳ ಕುರಿತಂತೆ ಧಾರ್ಮಿಕ ಚಿಂತನೆ ನಡೆಸಿದರೆ, ಪುತ್ತೂರಿನ ಉರಗತಜ್ಞರಾದ ಡಾ.ರವೀಂದ್ರನಾಥ್ ಐತಾಳ್ ಇವರು ಹಾವುಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ವಂದಿಸಿದರು.







