ಬ್ಯಾರಿ ವ್ಯಾಕರಣ ಇತರ ಯಾವುದೇ ಭಾಷೆಯ ಪಡಿಯಚ್ಚಲ್ಲ: ಎ.ವಿ.ನಾವಡ
ಬ್ಯಾರಿ ವ್ಯಾಕರಣ ಗ್ರಂಥ ಬಿಡುಗಡೆ

ಮಂಗಳೂರು, ಜು.27: ಅಧ್ಯಯನದ ದೃಷ್ಟಿಯಿಂದ ವ್ಯಾಕರಣದ ಅಗತ್ಯವಿದೆ. ಅಳಿವಿನಂಚಿನಲ್ಲಿದ್ದ ಬ್ಯಾರಿ ಭಾಷೆಯಲ್ಲಿ ವ್ಯಾಕರಣ ಹೊರ ಬಂದಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ. ಅಕಾಡಮಿ ಹೊರ ತಂದ ಈ ವ್ಯಾಕರಣ ಗ್ರಂಥವು ಇತರ ಯಾವುದೇ ಭಾಷೆಯ ಪಡಿಯಚ್ಚಲ್ಲ ಎಂದು ಹಂಪಿ ವಿವಿಯ ನಿವೃತ್ತ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ ಎ.ವಿ. ನಾವಡ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಹೊರತಂದ ‘ಬ್ಯಾರಿ ವ್ಯಾಕರಣ ಗ್ರಂಥ’ದ ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿಯನ್ನು ಪರಿಚಯಿಸಿ ಅವರು ಮಾತನಾಡಿದರು.
ಬ್ಯಾರಿ ಯಾವುದೇ ಭಾಷೆಯ ಉಪಭಾಷೆಯಲ್ಲ. ಅದು ಸ್ವತಂತ್ರ ಭಾಷೆಯಾಗಿದೆ. ಕನ್ನಡ ಮತ್ತು ತುಳುವಿನಲ್ಲಿಲ್ಲದ ‘ಧ್ವನಿಮಾ’ಗಳು ಬ್ಯಾರಿಯಲ್ಲಿದೆ. ಭಾಷೆಯ ಅಧ್ಯಯನದ ದೃಷ್ಟಿಯಿಂದ ವ್ಯಾಕರಣದ ಅಗತ್ಯವಿದೆ. ಕನಕದಾಸರ ಸಾಹಿತ್ಯ ಕೃತಿಗಳ ಅನುವಾದವೂ ಬ್ಯಾರಿ ಭಾಷೆಯಲ್ಲಾಗಿರುವುದು ಬ್ಯಾರಿಯ ಹಿರಿಮೆಗೊಂದು ಸಾಕ್ಷಿಯಾಗಿದೆ. ಒಂದು ಭಾಷೆಯ ಶ್ರೀಮಂತಿಕೆಗೆ ಇತರ ಭಾಷೆಗಳ ಶಬ್ಧಗಳ ಆಮದು-ರಫ್ತು ಮಾಡುವ ಅಗತ್ಯವೂ ಇದೆ. ಬ್ಯಾರಿ ಭಾಷೆಯಲ್ಲೂ ಕೂಡ ಈ ಪ್ರಕ್ರಿಯೆ ಹೆಚ್ಚೆಚ್ಚು ನಡೆಯಬೇಕು ಎಂದು ಎ.ವಿ.ನಾವಡ ಅಭಿಪ್ರಾಯಪಟ್ಟರಲ್ಲದೆ, ಮುಂದಿನ ದಿನಗಳಲ್ಲಿ 6ರಿಂದ 10ನೆ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಬ್ಯಾರಿ ಪಠ್ಯಪುಸ್ತಕ ಹೊರತರಲು ಅಕಾಡಮಿ ಪ್ರಯತ್ನಿಸಬೇಕು ಎಂದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ ಗ್ರಂಥವನ್ನು ಬಿಡುಗಡೆ ಮಾಡಿದರು. ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಕರಂಬಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಯು.ಟಿ.ಖಾದರ್ ದಫ್ ಬಾರಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್, ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಲಹೆಗಾರರಾದ ಇಬ್ರಾಹೀಂ ಕೋಡಿಜಾಲ್, ಅಹ್ಮದ್ ಬಾವಾ ಪಡೀಲ್, ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್, ಮಾಜಿ ಮೇಯರ್ ಕೆ. ಅಶ್ರಫ್ ಭಾಗವಹಿಸಿದ್ದರು.
ಕಾರ್ಯಕ್ರದಮಲ್ಲಿ ಬ್ಯಾರಿ ವ್ಯಾಕರಣ ಗ್ರಂಥದ ಸಂಪಾದಕ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಶರೀಫ್ ಮಡಿಕೇರಿ, ಅಶ್ರಫ್ ಮೈಸೂರು, ಸಲೀಂ, ತನ್ಸೀಫ್ ಕಿಲ್ಲೂರು, ಅನ್ಸಾರ್ ಬೆಳ್ಳಾರೆ, ಆರಿಫ್ ಪಡುಬಿದ್ರೆ, ಹಸನಬ್ಬ ಮೂಡುಬಿದಿರೆ, ಮರಿಯಂ ಇಸ್ಮಾಯೀಲ್, ಆಯಿಶಾ ಯು.ಕೆ. ಮತ್ತಿತರರು ಉಪಸ್ಥಿತರಿದ್ದರು.
ವ್ಯಾಕರಣ ಗ್ರಂಥದ ಸಂಯೋಜಕ ಬಶೀರ್ ಬೈಕಂಪಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರಿ ವ್ಯಾಕರಣ ಗ್ರಂಥದ ಸಂಪಾದಕ ಅಬ್ದುಲ್ ರಝಾಕ್ ಅನಂತಾಡಿ ಹೆಚ್ಚಿನವರು ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ವ್ಯಾಕರಣ ಅರ್ಥ ಮಾಡಿಕೊಳ್ಳುವುದಿಲ್ಲ. ಎಲ್ಲಾ ಭಾಷೆಗೂ ವ್ಯಾಕರಣವಿದೆ. ಆದರೆ ಮಾತನಾಡುವ ಹೆಚ್ಚಿನವರಿಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಬ್ಯಾರಿ ಸಾಹಿತ್ಯ ಅಕಾಡಮಿ ಹೊರತಂದ ಪ್ರಪ್ರಥಮ ಬ್ಯಾರಿ ವ್ಯಾಕರಣ ಗ್ರಂಥ ಇದಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಗ್ರಂಥದ ಅಗತ್ಯವಿದೆ. 24 ಅಧ್ಯಾಯಗಳಲ್ಲದೆ ಗಾದೆ, ಒಗಟುಗಳ ಬಗ್ಗೆಯೂ ಮಾಹಿತಿ ಇದೆ. ಕನ್ನಡ ಲಿಪಿ ಮತ್ತು ಬ್ಯಾರಿ ಭಾಷೆಯಲ್ಲಿ ಹೊರ ಬಂದ ಈ ಗ್ರಂಥವು ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲೂ ಮೂಡಿಬರಬೇಕಾಗಿದೆ ಎಂದರು.














