ಹಿಂದಿನ ಪ್ರಕರಣಗಳಿಗೆ ಶೀಘ್ರವೇ ಮುಕ್ತಿ: ಹೈಕೋರ್ಟ್ ಮುಖ್ಯ ನ್ಯಾ.ಅಭಯ ಓಕಾ

ಧಾರವಾಡ, ಜು.27: ಸತತ 5 ವರ್ಷಗಳ ಹಿಂದಿನ ಪ್ರಕರಣಗಳು ಬಾಳಿ ಉಳಿಸದಂತೆ ಸಂಕಲ್ಪ ತೊಟ್ಟಿದ್ದು, ಈ ಕಾರ್ಯ ಧಾರವಾಡ ಜಿಲ್ಲೆಯಿಂದಲೇ ಪ್ರಾರಂಭ ಆಗಬೇಕು ಎಂದು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ ಓಕಾ ಅವರು ನ್ಯಾಯಾಂಗ ಸಿಬ್ಬಂದಿಗೆ ಸೂಚಿಸಿದರು.
ಶನಿವಾರ ಜಿಲ್ಲೆಯ ವಕೀಲರ ಸಂಘವು ಏರ್ಪಡಿಸಿದ್ದ, ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ಪ್ರಕರಣಗಳು ಬಾಕಿ ಉಳಿಯದ ರಾಜ್ಯವನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ನುಡಿದರು.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಗೆ ನೀಡಿರುವ ಮೂಲಸೌಕರ್ಯ ಉತ್ತಮವಾಗಿದೆ ಎಂದ ಅವರು, ನ್ಯಾಯಾಲಯ ಎಂದರೆ ಕೇವಲ ಸುಂದರ ಮತ್ತು ಸುಸಜ್ಜಿತ ಕಟ್ಟಡ ಮಾತ್ರವಲ್ಲ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿನೂತನ ತಂತ್ರಜ್ಞಾನ ಅಳವಡಿಸುವ ಅಗತ್ಯವೂ ಇದೆ ಎಂದರು.
ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿ ಅಳವಡಿಸಿಕೊಂಡ ಮಾದರಿ ನ್ಯಾಯಾಲಯಗಳ ಸಾಲಿನಲ್ಲಿ ದಿಲ್ಲಿ, ಹರಿಯಾಣ, ನ್ಯಾಯಾಲಯಗಳು ಸೇರುತ್ತವೆ. ಹುಬ್ಬಳ್ಳಿಯ ನೂತನ ತಾಲೂಕು ನ್ಯಾಯಾಲಯವೂ ಈ ಸಾಲಿನಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್.ಗೋಡ್ಸೆ, ನ್ಯಾಯಮೂರ್ತಿ ದಿನೇಶಕುಮಾರ, ರಾಜ್ಯ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ವಿ.ಶ್ರೀಶಾನಂದ, ಜಿಲ್ಲಾ ನ್ಯಾಯಾಧೀಶ ಈಶಪ್ಪಭೂತೆ, ಸಂಘದ ಉಪಾಧ್ಯಕ್ಷ ಎನ್.ಆರ್.ಮಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಲಾಪಕ್ಕೆ ಸಮಯ ಕಡಿಮೆ
ರಾಜ್ಯ ಸರಕಾರ 4ನೆ ಶನಿವಾರವನ್ನು ರಜೆಯನ್ನಾಗಿ ಘೋಷಿಸಿದ್ದರಿಂದ ವರ್ಷದಲ್ಲಿ 10ರಿಂದ 12 ದಿನಗಳ ಕಲಾಪಕ್ಕೆ ಸಮಯ ಕಡಿಮೆಯಾಗಲಿದೆ. ಹೀಗಾಗಿ ನ್ಯಾಯಾಲಯದ ಸಮಯವನ್ನು ವಕೀಲರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಓಗಾ ಸಲಹೆ ನೀಡಿದರು.







