ಶ್ರೀನಿವಾಸ ಸಮೂಹ ಸಂಸ್ಥೆಯಿಂದ ಉದ್ಯೋಗ ಮೇಳ

ಮಂಗಳೂರು, ಜು.27: ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಣದಲ್ಲಿ ಉದ್ಯೋಗ ಮೇಳ ಪೂರಕ. ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಓದಿನೊಂದಿಗೆ ಭವಿಷ್ಯಕ್ಕೂ ಸಹಕಾರಿಯಾಗುತ್ತಿರುವುದು ಶ್ಲಾಘನೀಯ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.
ಶ್ರೀನಿವಾಸ ವಿಶ್ವ ವಿದ್ಯಾನಿಲಯ ಹಾಗೂ ಶ್ರೀನಿವಾಸ ಸಮೂಹ ಸಂಸ್ಥೆಗಳ ವತಿಯಿಂದ ಪಾಂಡೇಶ್ವರದಲ್ಲಿರುವ ಸಿಟಿ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉದ್ಯೋಗದ ಅಗತ್ಯವಿದ್ದರೂ, ಕೆಲವೊಮ್ಮೆ ಲಭ್ಯ ಉದ್ಯೋಗಗಳ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಉದ್ಯೋಗದಾತರನ್ನೇ ಒಂದೆಡೆ ಸೇರಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲು ಪೂರಕ ವಾತಾವರಣ ಕಲ್ಪಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಅತ್ಯುತ್ತಮ ಕಾರ್ಯಶೈಲಿಯಾಗಿದೆ ಎಂದವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿವಿಯ ಕುಲಾಧಿಪತಿ ಎ. ರಾಘವೇಂದ್ರ ರಾವ್ ಮಾತನಾಡಿ, ಶಿಕ್ಷಣವು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆ ಸಾಮರ್ಥ್ಯಕ್ಕನುಗುಣವಾಗಿ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವಂತೆ ಮಾಡುವುದು ಸಂಸ್ಥೆಯ ಉದ್ದೇಶ ಎಂದರು.
ವಿವಿಯ ಸಹಕುಲಾಧಿಪತಿ ಶ್ರೀನಿವಾಸ ರಾವ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳು. ಅಂತಹ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಪಡೆಯುವಲ್ಲಿ ನೆರವಾಗುವುದು ದೇಶ ಸೇವೆಯ ಒಂದು ಭಾಗವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕಿ ಡೈಸಿ ಮುಖ್ಯ ಅತಿಥಿಯಾಗಿದ್ದರು. ಶ್ರೆನಿವಾಸ ವಿವಿಯ ಉಪಕುಲಪತಿ ಡಾ.ಪಿ.ಎಸ್. ಐತಾಳ್, ರಿಜಿಸ್ಟ್ರಾರ್ (ಶೈಕ್ಷಣಿಕ) ಡಾ. ಅನಿಲ್‌ಕುಮಾರ್, ರಿಜಿಸ್ಟ್ರಾರ್ (ಅಭಿವೃದ್ಧಿ) ಡಾ. ಅಜಯ್, ಪ್ರಾಧ್ಯಾಪಕ ಪ್ರೊ. ವರುಣ್ ಮತ್ತಿತರರು ಉಪಸ್ಥಿತರಿದ್ದರು.












